ADVERTISEMENT

‌ಕೇಂದ್ರ ಸರ್ಕಾರದಿಂದ ಸಕ್ಕರೆ ರಫ್ತಿಗೆ ಅನುಮತಿ ನಿರೀಕ್ಷೆ

ಉತ್ಪಾದನೆ 8 ವರ್ಷದ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ

ಪಿಟಿಐ
Published 19 ಜನವರಿ 2025, 12:54 IST
Last Updated 19 ಜನವರಿ 2025, 12:54 IST
<div class="paragraphs"><p>ಸಕ್ಕರೆ (ಸಾಂಕೇತಿಕ ಚಿತ್ರ)</p></div>

ಸಕ್ಕರೆ (ಸಾಂಕೇತಿಕ ಚಿತ್ರ)

   

ಮುಂಬೈ/ ನವದೆಹಲಿ: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಕೇಂದ್ರ ಸರ್ಕಾರವು 10 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಇದರಿಂದ ದಾಸ್ತಾನಿರುವ ಸಕ್ಕರೆ ಮಾರಾಟಕ್ಕೆ ಕಾರ್ಖಾನೆಗಳಿಗೆ ನೆರವಾಗಲಿದೆ. ಜೊತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯ ಮೇಲೂ ಪರಿಣಾಮ ಬೀರಬಹುದು. ಶೀಘ್ರವೇ ಸರ್ಕಾರವು ಈ ಕುರಿತು ಆದೇಶ ಹೊರಡಿಸುವ ಸಾಧ್ಯತೆಯಿದೆ ಎಂದು ಹೇಳಿವೆ.

ADVERTISEMENT

ಈ ಬಾರಿ ದೇಶದ ವಾರ್ಷಿಕ ಬಳಕೆ ಪ್ರಮಾಣಕ್ಕಿಂತಲೂ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದ್ದು, ಎಂಟು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ರಫ್ತಿಗೆ ಅನುಮತಿ ನೀಡಲು ಸರ್ಕಾರ ಮುಂದಾಗಿದೆ ಎಂಬ ಸುದ್ದಿಯು ಕೆಲವು ವಾರಗಳಿಂದ ಹರಿದಾಡುತ್ತಿದೆ. ಇದು ವರ್ತಕರಿಗೆ ಅಚ್ಚರಿ ಕೂಡ ಉಂಟು ಮಾಡಿದೆ ಎಂದು ಹೇಳಿವೆ. 

ದೇಶದ ಒಟ್ಟು ಸಕ್ಕರೆ ಉತ್ಪಾದನೆ ಪೈಕಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಶೇ 80ರಷ್ಟಕ್ಕಿಂತ ಹೆಚ್ಚು ಉತ್ಪಾದನೆಯಾಗುತ್ತದೆ. ಆದರೆ, ಪ್ರಸಕ್ತ ವರ್ಷ ಈ ರಾಜ್ಯಗಳಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಹಾಗಾಗಿ, ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಉತ್ಪಾದನೆಯ ಅಂದಾಜನ್ನು ಕಾರ್ಖಾನೆಗಳು ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಹಿಂದಿನ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ 27 ದಶಲಕ್ಷ ಟನ್‌ನಷ್ಟು ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಬಗ್ಗೆ ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಬೆಲೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು 2023–24ರಿಂದ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಿದೆ. ಭಾರತವು ಪ್ರಮುಖವಾಗಿ ಇಂಡೊನೇಷ್ಯಾ, ಬಾಂಗ್ಲಾದೇಶ ಮತ್ತು ಯುಎಇಗೆ ಸಕ್ಕರೆ ರಫ್ತು ಮಾಡುತ್ತದೆ.

‘ಸ್ಥಳೀಯವಾಗಿ ಸಕ್ಕರೆ ಬೆಲೆ ಕಡಿಮೆ ಇರುವುದರಿಂದ ಕಾರ್ಖಾನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ರಫ್ತಿಗೆ ಅನುಮತಿ ನೀಡಿದರೆ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ’ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘದ (ಐಎಸ್‌ಎಂಎ) ಮಹಾನಿರ್ದೇಶಕ ‌ದೀಪಕ್ ಬಲ್ಲಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.