ನವದೆಹಲಿ: ಜಾಗತಿಕ ಮಟ್ಟದಲ್ಲಿ ಲಭಿಸುವ ಹಣಕಾಸಿನ ನೆರವನ್ನು ಪಾಕಿಸ್ತಾನವು ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳ ಖರೀದಿಗೆ ದುರ್ಬಳಕೆ ಮಾಡಿಕೊಳ್ಳಲಿದೆ. ಹಾಗಾಗಿ, ಮುಂದಿನ ತಿಂಗಳು ವಿಶ್ವಬ್ಯಾಂಕ್ ಆ ರಾಷ್ಟ್ರಕ್ಕೆ ನೀಡಲು ಉದ್ದೇಶಿಸುವ ಸಾಲದ ವಿರುದ್ಧ ಆಕ್ಷೇಪ ಮಂಡಿಸಲು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ವರ್ಷದ ಜನವರಿಯಲ್ಲಿ ದೇಶದ ಪಾಲುದಾರಿಕೆ ಚೌಕಟ್ಟು ಕುರಿತಂತೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಪಾಕಿಸ್ತಾನಕ್ಕೆ 2 ಸಾವಿರ ಕೋಟಿ ಡಾಲರ್ (₹1.70 ಲಕ್ಷ ಕೋಟಿ) ಸಾಲ ನೀಡಲು ವಿಶ್ವಬ್ಯಾಂಕ್ ತೀರ್ಮಾನಿಸಿದೆ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಆ ರಾಷ್ಟ್ರವು 2026ರಿಂದ 10 ವರ್ಷಗಳವರೆಗೆ ಈ ಹಣವನ್ನು ಹವಾಮಾನ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದೆ.
ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಗಳು ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗಾಗಿ ಅಭಿವೃದ್ಧಿಶೀಲ ದೇಶಗಳಿಗೆ ಆರ್ಥಿಕ ನೆರವು ನೀಡುತ್ತವೆ. ಆದರೆ, ಇಂತಹ ನೆರವು ಪಡೆದಿರುವ ಪಾಕಿಸ್ತಾನವು ರಕ್ಷಣಾ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಐಎಂಎಫ್ ನಿಲುವಿಗೂ ಆಕ್ಷೇಪ: ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿರುವ 230 ಕೋಟಿ ಡಾಲರ್ (₹19,500 ಕೋಟಿ) ಸಾಲದ ಬಗ್ಗೆಯೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾಲ ನಿಲುವಳಿಗೆ ಮತ ಚಲಾಯಿಸುವುದಕ್ಕೆ ನಡೆದ ಐಎಂಎಫ್ ಕಾರ್ಯಕಾರಿ ಮಂಡಳಿಯ ಸಭೆಯಿಂದ ಹೊರಗುಳಿದಿತ್ತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಎಂಎಫ್ ಮುಖ್ಯಸ್ಥರು ಮತ್ತು ಸದಸ್ಯರ ಜೊತೆಗೆ ಈ ಕುರಿತು ಚರ್ಚಿಸಿದ್ದರು. ಅಲ್ಲದೆ, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ದಾಖಲೆಗಳನ್ನೂ ಮಂಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಆದರೂ ಸಾಲ ನೀಡಿಕೆಯನ್ನು ಐಎಂಎಫ್ ಸ್ಥಗಿತಗೊಳಿಸಿಲ್ಲ. ಭಾರತದಿಂದ ಒತ್ತಡ ಹೆಚ್ಚಿದ್ದರಿಂದ ಸಾಲದ ಕಂತಿನ ಮಂಜೂರಿಗೂ ಮೊದಲು 11 ಷರತ್ತುಗಳನ್ನು ಪೂರೈಸಲು ಸೂಚಿಸಿತ್ತು ಎಂದು ಹೇಳಿವೆ.
‘ಯಾವುದೇ ದೇಶಕ್ಕೆ ಅಭಿವೃದ್ಧಿ ಚಟುವಟಿಕೆಗಳಿಗೆ ನೀಡುವ ಆರ್ಥಿಕ ನೆರವಿನ ಬಗ್ಗೆ ಭಾರತವು ತಗಾದೆ ವ್ಯಕ್ತಪಡಿಸಿಲ್ಲ. ಉಭಯ ದೇಶಗಳ ನಡುವೆ ತಲೆದೋರಿರುವ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನಕ್ಕೆ ಸಾಲ ನೀಡುವುದು ಸರಿಯಲ್ಲ ಎಂಬುದು ಭಾರತದ ವಾದ. ಅಭಿವೃದ್ಧಿ ಹೆಸರಿನಲ್ಲಿ ಪಡೆಯುವ ಹಣವನ್ನು ಆ ದೇಶವು ಜನರ ಕಲ್ಯಾಣಕ್ಕೆ ಬಳಸಿಲ್ಲ’ ಎಂದು ಹೇಳಿವೆ.
₹8,500 ಕೋಟಿ ಸಾಲ: ಐಎಂಎಫ್ ಅಸ್ತು
ವಾಷಿಂಗ್ಟನ್: ಪಾಕಿಸ್ತಾನವು ನಿಗದಿಪಡಿಸಿದ್ದ ಷರತ್ತುಗಳು ಮತ್ತು ಗುರಿಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ, ಇದೇ ತಿಂಗಳಿನಲ್ಲಿ ಆ ರಾಷ್ಟ್ರಕ್ಕೆ ಮೊದಲ ಕಂತಿನ ₹8,500 ಕೋಟಿ ಸಾಲದ ನೆರವು ನೀಡಲು ಕಾರ್ಯಕಾರಿ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ತಿಳಿಸಿದೆ.
‘ಸಾಲ ವಿಸ್ತರಣೆ ಕಾರ್ಯಕ್ರಮದಡಿ ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡಲು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಮಂಡಳಿಯು ನಿರ್ಧರಿಸಿತ್ತು. ಇದನ್ನು ಪರಾಮರ್ಶಿಸಿ ಸಾಲದ ಮೊತ್ತ ಬಿಡುಗಡೆಗೆ ಮಂಡಳಿಯು ಮೇ 9ರಂದು ಅನುಮೋದನೆ ನೀಡಿದೆ’ ಎಂದು ಐಎಂಎಫ್‌ನ ಸಂವಹನ ವಿಭಾಗದ ನಿರ್ದೇಶಕಿ ಜೂಲಿ ಕೊಜಾಕ್ ತಿಳಿಸಿದ್ದಾರೆ.
ಐಎಂಎಫ್ ನೀಡಿದ್ದ ಎಲ್ಲಾ ಗುರಿಗಳನ್ನು ಪಾಕಿಸ್ತಾನವು ಈಡೇರಿಸಿದೆ. ಕೆಲವು ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ, ಮಂಡಳಿಯು ಸಾಲ ನೀಡಿಕೆ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ’ ಎಂದು ಹೇಳಿದ್ದಾರೆ.
ಅಲ್ಲಿನ ಕೇಂದ್ರೀಯ ಬ್ಯಾಂಕ್ ಮತ್ತು ಅದರಡಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಸರ್ಕಾರದ ಬಜೆಟ್‌ಗೆ ಬ್ಯಾಂಕ್‌ನಿಂದ ಈ ಹಣವು ವರ್ಗಾವಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಷರತ್ತುಗಳನ್ನು ಪೂರೈಸಿದೆ. ಹಾಗಾಗಿ, ಇದೇ ತಿಂಗಳು ಮೊದಲ ಕಂತಿನ 100 ಕೋಟಿ ಡಾಲರ್ (₹8,500 ಕೋಟಿ) ಸಾಲ ನೀಡಲಾಗುವುದು.– ಜೂಲಿ ಕೊಜಾಕ್, ಐಎಂಎಫ್‌ನ ಸಂವಹನ ವಿಭಾಗದ ನಿರ್ದೇಶಕಿ
ಮತ್ತೆ ಬೂದು ಪಟ್ಟಿಗೆ ಸೇರಿಸಲು ಸಿದ್ಧತೆ
ನವದೆಹಲಿ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ಮತ್ತೆ ಬೂದು ಪಟ್ಟಿಗೆ (ಗ್ರೇ ಲಿಸ್ಟ್) ಸೇರ್ಪಡೆಗೊಳಿಸುವ ಸಂಬಂಧ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್) ಮುಂದೆ ದಾಖಲೆಗಳನ್ನು ಸಲ್ಲಿಸಲು ಭಾರತ ಸಿದ್ಧತೆ ನಡೆಸಿದೆ.
ಎಫ್‌ಎಟಿಎಫ್‌ನ ಏಷ್ಯಾ ಫೆಸಿಪಿಕ್ ದೇಶಗಳ ಸಭೆಯು ಆಗಸ್ಟ್ 25ರಂದು ನಿಗದಿಯಾಗಿದೆ. ಸಭೆಯಲ್ಲಿ ಪಾಕಿಸ್ತಾನವು ಉಗ್ರರಿಗೆ ನೀಡುತ್ತಿರುವ ನೆರವು ಮತ್ತು ಯುದ್ಧ ಸಾಮಗ್ರಿಗಳ ಖರೀದಿ ಮಾಡುತ್ತಿರುವ ವೆಚ್ಚದ ಕುರಿತ ದಾಖಲೆಗಳನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಉಗ್ರರಿಗೆ ಆ ರಾಷ್ಟ್ರವು ಪ್ರಶಸ್ತ ಅಡಗು ತಾಣವಾಗಿದೆ ಎಂಬುದನ್ನು ಸಾಬೀತುಪಡಿಸಲು ಸಜ್ಜಾಗಿದೆ ಎಂದು ಹೇಳಿವೆ.
ಹಣ ಅಕ್ರಮ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ಪೂರೈಕೆಗೆ ತಡೆ ಹಾಗೂ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಬೆದರಿಕೆಯೊಡ್ಡುವ ಕೃತ್ಯ ತಡೆಯುವ ಕೆಲಸವನ್ನು ಎಫ್‌ಎಟಿಎಫ್ ಮಾಡುತ್ತದೆ. ಇಂತಹ ಕೃತ್ಯಗಳಿಗೆ ಬೆಂಬಲ ನೀಡುವ ದೇಶಗಳನ್ನು ಬೂದು ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿವೆ.
ಪ್ರಸ್ತುತ ವಿಶ್ವದ 25 ದೇಶಗಳು ಈ ಪಟ್ಟಿಯಲ್ಲಿವೆ. 2008ರ ಫೆಬ್ರುವರಿವರೆಗೂ ಪಾಕಿಸ್ತಾನ ಕೂಡ ಬೂದು ಪಟ್ಟಿಯಲ್ಲಿತ್ತು. ಆ ನಂತರ ಅದನ್ನು ಮೇಲ್ವಿಚಾರಣೆ ಪಟ್ಟಿಗೆ ಸೇರಿಸಲಾಗಿತ್ತು. 2022ರ ಅಕ್ಟೋಬರ್‌ನಲ್ಲಿ ಈ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಹಣ ಅಕ್ರಮ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ತಡೆಗೆ ಸಂಬಂಧಿಸಿದಂತೆ ಏಷ್ಯಾ ಫೆಸಿಪಿಕ್ ರಾಷ್ಟ್ರಗಳ ಜೊತೆಗೂಡಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಯಪಡೆಯು ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.