ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆಜಾನ್ ಮತ್ತು ವಾಲ್‌ಮಾರ್ಟ್‌ನಂತಹ ಆನ್‌ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆಗಳಿಗೆ ತನ್ನ 125 ಬಿಲಿಯನ್ ಡಾಲರ್ ಇ-ಕಾಮರ್ಸ್ ಮಾರುಕಟ್ಟೆಗೆ ಪೂರ್ಣ ಪ್ರವೇಶವನ್ನು ನೀಡುವಂತೆ ಭಾರತವನ್ನು ಒತ್ತಾಯಿಸುವ ಉದ್ದೇಶ ಹೊಂದಿದೆ ಎಂದು ಉದ್ಯಮ ಕಾರ್ಯನಿರ್ವಾಹಕರು, ಲಾಬಿದಾರರು ಮತ್ತು ಅಮೆರಿಕ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.
ಆಹಾರದಿಂದ ಕಾರುಗಳವರೆಗೆ ಎಲ್ಲ ವಲಯಗಳನ್ನು ಒಳಗೊಳ್ಳಲು ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ವ್ಯಾಪಕ ಮಾತುಕತೆಗಳಲ್ಲಿ ಇ-ಕಾಮರ್ಸ್‌ನಲ್ಲಿ ಸಮಾನ ಅವಕಾಶಕ್ಕಾಗಿ ಭಾರತ ಸರ್ಕಾರವನ್ನು ಒತ್ತಾಯಿಸಲು ಅಮೆರಿಕ ಯೋಜಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಟ್ರಂಪ್ ಆಡಳಿತವು ಭಾರತ ಸರ್ಕಾರದಿಂದ ಯಾವ ಕ್ರಮಗಳನ್ನು ನಿರೀಕ್ಷಿಸುತ್ತದೆ ಎಂಬುದನ್ನು ಅದು ಉಲ್ಲೇಖಿಸಿಲ್ಲ.
ಅಮೆಜಾನ್ ಮತ್ತು ವಾಲ್‌ಮಾರ್ಟ್ ಭಾರತದಲ್ಲಿ ಸ್ಥಳೀಯ ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಆದರೆ, ದೇಶೀಯ ಸಂಸ್ಥೆ ರಿಲಯನ್ಸ್‌ನಂತಲ್ಲದೆ, ದಾಸ್ತಾನು ಸಂಗ್ರಹ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದರ ಮೇಲೆ ನಿರ್ಬಂಧಗಳನ್ನು ಎದುರಿಸುತ್ತಿವೆ.
ಅಮೆರಿಕದ ಪ್ರತಿ ಸುಂಕ ತಪ್ಪಿಸಿಕೊಳ್ಳಲು ಭಾರತ ಮುಂದಿಟ್ಟಿರುವ ವ್ಯಾಪಾರ ಒಪ್ಪಂದವು ಈಗ ಮಾತುಕತೆಯ ಹಂತದಲ್ಲಿದೆ.
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸಹ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದು, ವ್ಯಾಪಾರ ಒಪ್ಪಂದ ಫಲಪ್ರದವಾಗುವ ನಿರೀಕ್ಷೆ ಇದೆ.
ಏಪ್ರಿಲ್ 9ರಂದು ವಿವಿಧ ದೇಶಗಳ ಆಮದುಗಳ ಮೇಲೆ ಟ್ರಂಪ್ ಘೋಷಿಸಿದ ಸುಂಕಕ್ಕೆ 90 ದಿನಗಳ ವಿರಾಮ ನೀಡಿದ್ದು, ಈ ನಡುವೆ ವಿವಿಧ ದೆಶಗಳು ಅಮೆರಿಕ ಜೊತೆ ಮಾತುಕತೆಯಲ್ಲಿ ತೊಡಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.