ADVERTISEMENT

ದೊಡ್ಡ ಬ್ಯಾಂಕ್‌ಗಳಿಗೆ ಖಾತೆ ವರ್ಗಾಯಿಸಲು ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಒಲವು

ಸುರಕ್ಷಿತ ವಹಿವಾಟು ಚಿಂತೆ: ಬೃಹತ್‌ ಕಾರ್ಪೊರೇಟ್‌ಗಳ ನಿರ್ಧಾರ

ಪಿಟಿಐ
Published 17 ಜೂನ್ 2020, 12:31 IST
Last Updated 17 ಜೂನ್ 2020, 12:31 IST
–
   

ನವದೆಹಲಿ: ಕೋವಿಡ್ ಪಿಡುಗಿನ ಕಾರಣಕ್ಕೆ ಹಣಕಾಸು ಕ್ಷೇತ್ರದ ಸ್ಥಿರತೆ ಬಗ್ಗೆ ಕಳವಳ ಹೊಂದಿರುವ ದೇಶದ ಅನೇಕ ಬೃಹತ್‌ ಕಂಪನಿಗಳು ತಮ್ಮ ಬ್ಯಾಂಕಿಂಗ್‌ ವಹಿವಾಟನ್ನು ಆರ್ಥಿಕವಾಗಿ ಹೆಚ್ಚು ಸ್ಥಿರವಾಗಿರುವ ದೊಡ್ಡ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಒಲವು ತೋರಿಸುತ್ತಿವೆ.

ಕೋವಿಡ್‌ ಪಿಡುಗು ವಿಶ್ವದಾದ್ಯಂತ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿರುವುದರ ಜತೆಗೆ ಹಣಕಾಸು ಕ್ಷೇತ್ರವನ್ನೂ ಸಂಕಷ್ಟಕ್ಕೆ ದೂಡಿದೆ. ಕೋವಿಡ್ ಪಿಡುಗಿನ ಮುಂಚಿನಿಂದಲೂ ದೇಶಿ ಬ್ಯಾಂಕಿಂಗ್‌ ವ್ಯವಸ್ಥೆಯುಅನಿಶ್ಚಿತತೆ ಎದುರಿಸುತ್ತಿದೆ. ಕೆಲ ಬ್ಯಾಂಕ್‌ಗಳ ಸ್ಥಿರತೆ ಬಗ್ಗೆ ಸಂದೇಹ ಹೊಂದಿರುವ ಕಾರ್ಪೊರೇಟ್‌ಗಳು ತಮ್ಮೆಲ್ಲ ಹಣಕಾಸಿನ ವಹಿವಾಟುಗಳನ್ನು ದೊಡ್ಡ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಮುಂದಾಗಿವೆ ಎಂದು ನ್ಯೂ ಗ್ರೀನ್‌ವಿಚ್‌ ಅಸೋಸಿಯೇಟ್ಸ್‌ ಸಿದ್ಧಪಡಿಸಿರುವ ವರದಿ ತಿಳಿಸಿದೆ.

‘ದಿಗ್ಬಂಧನದ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡಿದ್ದ ಅಸಾಮಾನ್ಯ ಪರಿಸ್ಥಿತಿಯಲ್ಲಿ ಅನೇಕ ಮಧ್ಯಮ ಮತ್ತು ದೊಡ್ಡ ಕಂಪನಿಗಳು ತಮ್ಮೆಲ್ಲ ವಹಿವಾಟನ್ನು ಸುರಕ್ಷಿತ ಹಣಕಾಸು ಪರಿಸ್ಥಿತಿಯ ಬ್ಯಾಂಕ್‌ಗಳಿಗೆ ವರ್ಗಾಯಿಸುತ್ತಿವೆ’ ಎಂದು ಗ್ರೀನ್‌ವಿಚ್‌ ಅಸೋಸಿಯೇಟ್ಸ್‌ನ ಏಷ್ಯಾ ವಲಯದ ಮುಖ್ಯಸ್ಥ ಗೌರವ್‌ ಅರೋರಾ ಹೇಳಿದ್ದಾರೆ.

ADVERTISEMENT

ಜಾಗತಿಕ ಹಣಕಾಸು ಸೇವಾ ವಲಯದ ವಿಶ್ಲೇಷಣೆ ಮತ್ತು ಒಳನೋಟವನ್ನು ರೀನ್‌ವಿಚ್‌ ಅಸೋಸಿಯೇಟ್ಸ್‌ ನೀಡುತ್ತಿದೆ.

ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಕೆಲ ಬ್ಯಾಂಕ್‌ಗಳ ಸ್ಥಿರತೆ ಬಗ್ಗೆ ಚಿಂತಿತರಾಗಿರುವ ಕಂಪನಿಗಳು ದೇಶದ ಅತಿದೊಡ್ಡ ಮತ್ತು ಗರಿಷ್ಠ ಸ್ಥಿರತೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ತಮ್ಮ ಬ್ಯಾಂಕಿಂಗ್‌ ವಹಿವಾಟನ್ನು ವರ್ಗಾಯಿಸಲಿವೆ.

ಗ್ರೀನ್‌ವಿಚ್‌ ಅಸೋಸಿಯೇಟ್ಸ್‌ನ ವಿಶ್ಲೇಷಣೆ ಪ್ರಕಾರ, ಎಸ್‌ಬಿಐನ ಸೇವಾ ಗುಣಮಟ್ಟವು ಇತ್ತೀಚೆಗೆ ಸುಧಾರಣೆ ಕಾಣುತ್ತಿದೆ.

'ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲ ಬ್ಯಾಂಕ್‌ಗಳ ಸೇವಾ ಗುಣಮಟ್ಟ ಮತ್ತು ಸಾಲದ ಧೋರಣೆ ಬಗ್ಗೆ ಅಸಮಾಧಾನ ತಳೆದಿರುವ ಕಂಪನಿಗಳು ತಮ್ಮ ಬ್ಯಾಂಕ್‌ ಖಾತೆಗಳನ್ನು ದೊಡ್ಡ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಉತ್ಸುಕತೆ ತೋರಿಸುತ್ತಿವೆ’ ಎಂದು ಗ್ರೀನ್‌ವಿಚ್‌ ಅಸೋಸಿಯೇಟ್ಸ್‌ನ ವರದಿ ಸಿದ್ಧಪಡಿಸಿದವರಲ್ಲಿ ಒಬ್ಬರಾಗಿರುವ ವಿನ್‌ಸ್ಟನ್‌ ಜೆ. ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.