ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಅತಿ ದೊಡ್ಡ ಬೆಳವಣಿಗೆ ಕಾಣಲಿದೆ ಐ.ಟಿ ಉದ್ಯಮ

ಪಿಟಿಐ
Published 15 ಫೆಬ್ರುವರಿ 2022, 16:00 IST
Last Updated 15 ಫೆಬ್ರುವರಿ 2022, 16:00 IST
   

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಐ.ಟಿ. ವಲಯವು ಶೇಕಡ 15.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಐ.ಟಿ. ಉದ್ಯಮ ಸಂಘಟನೆ ನಾಸ್ಕಾಂ ಅಂದಾಜಿಸಿದೆ. ಇದು ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಅತಿದೊಡ್ಡ ಬೆಳವಣಿಗೆ ಪ್ರಮಾಣ ಆಗಲಿದೆ.

ಐ.ಟಿ. ಉದ್ಯಮದ ಆದಾಯದಲ್ಲಿನ ಬೆಳವಣಿಗೆಯು 2020–21ರಲ್ಲಿ ಕಂಡುಬಂದ ಶೇ 2.3ರ ಪ್ರಮಾಣಕ್ಕಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಅಲ್ಲದೆ, ಇದು ಕೋವಿಡ್‌ ಪೂರ್ವದ 2019–20ನೆಯ ಹಣಕಾಸು ವರ್ಷದಲ್ಲಿ ಕಂಡುಬಂದ ಬೆಳವಣಿಗೆಯ ಎರಡು ಪಟ್ಟು ಹೆಚ್ಚು ಇರಲಿದೆ ಎಂದು ನಾಸ್ಕಾಂ ಅಧ್ಯಕ್ಷೆ ದೇವಜಾನಿ ಘೋಷ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಐ.ಟಿ. ಉದ್ಯಮದ ಒಟ್ಟು ಆದಾಯವು ಇದೇ ಮೊದಲ ಬಾರಿಗೆ ₹ 15 ಲಕ್ಷ ಕೋಟಿಯ ಗಡಿಯನ್ನು ದಾಟಲಿದೆ. ಉದ್ಯಮದ ಒಟ್ಟು ಆದಾಯವನ್ನು ₹ 26 ಲಕ್ಷ ಕೋಟಿಗೆ ತಲುಪಿಸುವ ಗುರಿಯನ್ನು ನಾಸ್ಕಾಂ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದೇಶದ ಇತರ ವಲಯಗಳಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿ ಇರುವ ಹೊತ್ತಿನಲ್ಲಿ ಐ.ಟಿ. ಉದ್ಯಮ ವಲಯವು ಹೊಸದಾಗಿ 4.5 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದೆ. ದೇಶದಲ್ಲಿ ಈಗ ಒಟ್ಟು 51 ಲಕ್ಷ ಮಂದಿ ಐ.ಟಿ. ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ ಉದ್ಯೋಗ ಪಡೆದವರ ಪೈಕಿ ಶೇಕಡ 44ರಷ್ಟು ಮಂದಿ (ಸರಿಸುಮಾರು 2 ಲಕ್ಷ) ಮಹಿಳೆಯರು. ಈಗ ದೇಶದ ಐ.ಟಿ. ಉದ್ಯಮದಲ್ಲಿ ಒಟ್ಟು 18 ಲಕ್ಷ ಮಂದಿ ಮಹಿಳೆಯರು ದುಡಿಯುತ್ತಿದ್ದಾರೆ.

ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಕೇಂದ್ರೀಕೃತ ಆಗಿದ್ದ ಉದ್ಯಮವು ಈಗ ಇಂದೋರ್, ಜೈಪುರ, ಕೋಲ್ಕತ್ತ, ಕೊಯಮತ್ತೂರು, ಅಹಮದಾಬಾದ್‌ನಂತಹ ನಗರಗಳಲ್ಲಿ ಕಿರು ಐ.ಟಿ. ಕೇಂದ್ರಗಳನ್ನು ಹೊಂದಿದೆ.

ಈ ಉದ್ಯಮದಲ್ಲಿನ ನೌಕರರು ಕೆಲಸ ತೊರೆಯುವ ಪ್ರಮಾಣವು ಈಗ ಗರಿಷ್ಠ ಮಟ್ಟವನ್ನು ತಲುಪಿರಬಹುದು ಎಂದು ನಾಸ್ಕಾಂನ ಉಪಾಧ್ಯಕ್ಷ ಕೃಷ್ಣನ್ ರಾಮಾನುಜಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.