ADVERTISEMENT

ಐಒಸಿ ಬಂಕ್‌ಗಳಲ್ಲಿ ಬಿಎಸ್‌6 ಇಂಧನ ಲಭ್ಯ

ದೇಶದಾದ್ಯಂತ ಏಪ್ರಿಲ್‌ 1ರಿಂದ ಕಡ್ಡಾಯ ಮಾರಾಟ l ಚಿತ್ರದುರ್ಗದಲ್ಲಿ ತೈಲ ಶೇಖರಣಾ ಘಟಕ ಆರಂಭಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 20:05 IST
Last Updated 28 ಫೆಬ್ರುವರಿ 2020, 20:05 IST
ಐಒಸಿಎಲ್‌ನ ರಾಜ್ಯ ಘಟಕದ ಮುಖ್ಯಸ್ಥ ಡಿ. ಎಲ್‌. ಪ್ರಮೋದ್‌, ಚೀಫ್‌ ಜನರಲ್‌ ಮ್ಯಾನೇಜರ್‌ ರಾಜೇಶ್‌ ಎಸ್‌. ಮತ್ತು ಜನರಲ್‌ ಮ್ಯಾನೇಜರ್‌ ಗಣೇಶನ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ
ಐಒಸಿಎಲ್‌ನ ರಾಜ್ಯ ಘಟಕದ ಮುಖ್ಯಸ್ಥ ಡಿ. ಎಲ್‌. ಪ್ರಮೋದ್‌, ಚೀಫ್‌ ಜನರಲ್‌ ಮ್ಯಾನೇಜರ್‌ ರಾಜೇಶ್‌ ಎಸ್‌. ಮತ್ತು ಜನರಲ್‌ ಮ್ಯಾನೇಜರ್‌ ಗಣೇಶನ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿರುವ ಅಂದಾಜು 4 ಸಾವಿರ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ನಿನ (ಐಒಸಿ) ಪೆಟ್ರೋಲ್‌ ಬಂಕ್‌ಗಳಲ್ಲಿ ಈಗಾಗಲೇ ಭಾರತ್‌ ಸ್ಟೇಜ್‌ (ಬಿಎಸ್‌) 6 ಇಂಧನ ಲಭ್ಯವಿದ್ದು, ಸದ್ಯ ಬಿಎಸ್‌4 ದರದಲ್ಲೇ ಬಿಎಸ್‌6 ಇಂಧನವನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಕಂಪನಿಯ ರಾಜ್ಯ ಘಟಕದ ಮುಖ್ಯಸ್ಥ ಡಿ.ಎಲ್‌.ಪ್ರಮೋದ್‌ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಐಒಸಿಎಲ್‌ನ ಬಂಡವಾಳ ಹೂಡಿಕೆ ಹಾಗೂ ಹೊಸ ಯೋಜನೆಗಳು ಕುರಿತು ಸುದ್ದಿಗೋಷ್ಠಿ
ಯಲ್ಲಿ ವಿವರ ನೀಡಿದ ಪ್ರಮೋದ್‌, ‘ದೇಶದಲ್ಲಿ ಏ.1ರಿಂದ ಬಿಎಸ್‌6 ಇಂಧನ ಮಾರಾಟ ಕಡ್ಡಾಯವಾಗಿದೆ. ಬಿಎಸ್‌4 ಇಂಧನದಲ್ಲಿ ಗಂಧಕದ (ಸಲ್ಫರ್‌) ಪ್ರಮಾಣ 50 ಪಿಪಿಎಂನಷ್ಟಿದ್ದರೆ, ಬಿಎಸ್‌6 ಇಂಧನದಲ್ಲಿ ಈ ಪ್ರಮಾಣ 10 ಪಿಪಿಎಂನಷ್ಟಿದೆ.ಬಿಎಸ್‌4 ಎಂಜಿನ್‌ ಇರುವ ವಾಹನಗಳು ಬಿಎಸ್‌6 ಇಂಧನ ಬಳಸಿದರೆ ಮಾಲಿನ್ಯ ಪ್ರಮಾಣ ಇಳಿಕೆಯಾಗಲಿದೆ’ ಎಂದರು.

₹ 17 ಸಾವಿರ ಕೋಟಿ ಹೂಡಿಕೆ: ‘ಬಿಎಸ್‌6 ಇಂಧನ ಉತ್ಪಾದನೆಗೆ ‘ಐಒಸಿ’ಯು ₹17 ಸಾವಿರ ಕೋಟಿ ಹೂಡಿಕೆ ಮಾಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಒಟ್ಟಾರೆ ಹೂಡಿಕೆ ₹ 28 ಸಾವಿರ ಕೋಟಿಗಳಷ್ಟಿದೆ’ ಎಂದರು.

ADVERTISEMENT

₹500 ಕೋಟಿ ಹೂಡಿಕೆ: ‘ತೈಲ ಸರಬರಾಜು ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಚಿತ್ರದುರ್ಗ
ದಲ್ಲಿ ನೂತನವಾದ ತೈಲ ಶೇಖರಣಾ ಘಟಕ(ಆಯಿಲ್‌ ಟರ್ಮಿನಲ್‌) ಪ್ರಾರಂಭಿಸಲು ಐಒಸಿಎಲ್‌ ನಿರ್ಧರಿಸಿದ್ದು, ಇದಕ್ಕಾಗಿ ₹500 ಕೋಟಿ ಹೂಡಿಕೆ ಮಾಡಲಿದೆ. ಈಗಾಗಲೇ ಈ ಕುರಿತು ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ಬಯೋ ಡೀಸೆಲ್‌ಗೆ ಉತ್ತೇಜನ: ‘ದೇಶದಲ್ಲಿ ಅಂದಾಜು 2,700 ಕೋಟಿ ಲೀಟರ್ ಅಡುಗೆ ಎಣ್ಣೆ ಬಳಸುತ್ತಾರೆ. ಎರಡು ಮೂರು ಬಾರಿ ಅಡುಗೆಗೆ ಬಳಸಿದ ನಂತರ ಉಳಿದ ಎಣ್ಣೆ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತದೆ.ಈ ಎಣ್ಣೆಯಿಂದ ಜೈವಿಕ ಡೀಸೆಲ್‌ ಉತ್ಪಾದನೆಗೆ ಐಒಸಿಎಲ್‌ ಉತ್ತೇಜನ ನೀಡುತ್ತಿದೆ. ಈ ಕುರಿತು ಹೋಟೆಲ್‌ ಮಾಲೀಕರು ಹಾಗೂ ಬಯೊ ಡೀಸೆಲ್‌ ಉತ್ಪಾದಕರ ಜೊತೆ ಸಭೆ ನಡೆಸಲಾಗಿದೆ. ಈ ಯೋಜನೆ ಪ್ರಾರಂಭಿಕ ಹಂತದಲ್ಲಿದ್ದು, ಬೆಂಗಳೂರಿನ ಉತ್ಪಾದಕರೊಬ್ಬರು ಪ್ರತಿ ತಿಂಗಳಿಗೆ 40 ಸಾವಿರ ಲೀಟರ್‌ ಬಯೊ ಡೀಸೆಲ್‌ ಪೂರೈಕೆಗೆ ಮುಂದೆ ಬಂದಿದ್ದಾರೆ’ ಎಂದು ಹೇಳಿದರು.

ಇಥೆನಾಲ್‌ ಪೂರೈಕೆಯಲ್ಲಿ ವ್ಯತ್ಯಯ

‘ಭಾರತವು ಶೇ 88 ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪ್ರಮಾಣವನ್ನು ಕಡಿಮೆ ಮಾಡಲು, ಇಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆ ಮಾಡಲಾಗುತ್ತಿದೆ. ಶೇ 10 ಇಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮಾರಾಟ ಗುರಿಯನ್ನು ನೀಡಲಾಗಿದ್ದು, ಈ ಪೈಕಿ ಐಒಸಿಎಲ್‌ ಶೇ 8.6 ಗುರಿಯನ್ನು ಮುಟ್ಟಿದೆ. 1 ಲಕ್ಷ ಕಿಲೋಲೀಟರ್‌ ಇಥೆನಾಲ್‌ ಅವಶ್ಯಕತೆ ಇದೆ. ಪೂರೈಕೆಯಲ್ಲಿನ ವ್ಯತ್ಯಯಿಂದಾಗಿ ಪೂರ್ಣ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಅಂದಾಜು 20 ಸಾವಿರ ಕಿಲೋಲೀಟರ್‌ ಇಥೆನಾಲ್‌ ಇನ್ನೂ ಅವಶ್ಯವಿದೆ’ ಎಂದು ತಿಳಿಸಿದ್ದಾರೆ.

₹ 10 ಕೋಟಿ ವೆಚ್ಚದಲ್ಲಿ ವಿಆರ್‌ಎಸ್‌

‘ತೈಲ ಆವಿಯಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲುರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ದೇವನಗುಂದಿಯಲ್ಲಿರುವ ಐಒಸಿಎಲ್‌ ಟರ್ಮಿನಲ್‌ನಲ್ಲಿ ₹10 ಕೋಟಿ ವೆಚ್ಚದಲ್ಲಿ ‘ವೇಪರ್‌ ರಿಕವರಿ ಸಿಸ್ಟಂ (ವಿಆರ್‌ಎಸ್‌)’ ಅಳವಡಿಸಲಾಗಿದೆ. ವಾಹನಗಳಿಗೆ ಇಂಧನ ಭರ್ತಿ ಮಾಡುವ ಸಂದರ್ಭದಲ್ಲೂ ತೈಲ ಆವಿಯಾಗದಂಥ ವ್ಯವಸ್ಥೆಯನ್ನು ಬೆಂಗಳೂರಿನ 70 ಬಂಕ್‌ಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು’ ಎಂದರು.

34 ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್‌ ಘಟಕ

‘ಮೊದಲ ಹಂತದಲ್ಲಿ ದೇಶದ 500 ಐಒಸಿಎಲ್‌ ಬಂಕ್‌ಗಳಲ್ಲಿ ವಿದ್ಯುತ್‌ ವಾಹನ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದ್ದು, ರಾಜ್ಯದಲ್ಲಿ ಮಾರ್ಚ್‌ ಅಂತ್ಯದೊಳಗೆ 26 ಬಂಕ್‌ಗಳಲ್ಲಿ ಈ ಘಟಕ ಪ್ರಾರಂಭವಾಗಲಿದೆ. 8 ಬಂಕ್‌ಗಳಲ್ಲಿ ಬ್ಯಾಟರಿ ಬದಲಾವಣೆ ವ್ಯವಸ್ಥೆ (ಬ್ಯಾಟರಿ ಸ್ವ್ಯಾಪಿಂಗ್‌) ಇರಲಿದೆ. ಈ ಕುರಿತು ಎನ್‌ಟಿಪಿಸಿ ಸೇರಿದಂತೆ ಹಲವು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ರಾಜ್ಯದಲ್ಲಿ ಶೇ 100 ಎಲ್‌ಪಿಜಿ ಸಂಪರ್ಕ

‘ರಾಜ್ಯದಲ್ಲಿ ಒಟ್ಟಾರೆ 1.6 ಕೋಟಿ ಗೃಹೋಪಯೋಗಿ ಎಲ್‌ಪಿಜಿ ಸಂಪರ್ಕ ನೀಡಲಾಗಿದ್ದು, ಇದರಲ್ಲಿಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯೇ (ಪಿಎಂಯುವೈ) 31.5 ಲಕ್ಷ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. 2014ರಲ್ಲಿ ಕೇವಲ ಶೇ 68 ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವಿತ್ತು. ಇದೀಗ ಶೇ 100 ಕುಟುಂಬಗಳಿಗೂ ಎಲ್‌ಪಿಜಿ ಸಂಪರ್ಕವಿದೆ’ ಎಂದು ಪ್ರಮೋದ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.