ನವದೆಹಲಿ: ಬಳಸಿದ ಅಡುಗೆ ಎಣ್ಣೆಯನ್ನು ವಿಮಾನದ ಇಂಧನವನ್ನಾಗಿ ಪರಿವರ್ತಿಸುವ ಕಾರ್ಯವನ್ನು ವರ್ಷಾಂತ್ಯದ ವೇಳೆಗೆ ಇಂಡಿಯನ್ ಆಯಿಲ್ ಕಂಪನಿ ಆರಂಭಿಸಲಿದೆ.
ಬಳಸಿದ ಅಡುಗೆ ಎಣ್ಣೆಯಿಂದ ಸುಸ್ಥಿರ ವಿಮಾನ ಇಂಧನ (ಎಸ್‌ಎಎಫ್) ಉತ್ಪಾದಿಸುವ ಪ್ರಮಾಣ ಪತ್ರವನ್ನು ಇಂಡಿಯನ್ ಆಯಿಲ್‌ನ ಹರಿಯಾಣದ ಪಾಣಿಪತ್ ಸಂಸ್ಕರಣಾ ಘಟಕವು ಪಡೆದಿದೆ. ಈ ರೀತಿ ಅಂತರರಾಷ್ಟ್ರೀಯ ಪ್ರಮಾಣಪತ್ರ ಪಡೆದ ದೇಶದ ಮೊದಲ ಕಂಪನಿ ಇಂಡಿಯನ್ ಆಯಿಲ್ ಎಂದು ಕಂಪನಿಯ ಅಧ್ಯಕ್ಷ ಅರವಿಂದರ್ ಸಿಂಗ್ ಸಾಹ್ನಿ ಹೇಳಿದ್ದಾರೆ.
ಎಸ್‌ಎಎಫ್ ಪರ್ಯಾಯ ಇಂಧನವಾಗಿದೆ. ಇದು ವಿಮಾನಗಳ ಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಸಾಂಪ್ರದಾಯಿಕ ವಿಮಾನ ಇಂಧನದ ಜೊತೆ ಶೇ 50ರಷ್ಟು ಮಿಶ್ರಣ ಮಾಡಬಹುದಾಗಿದೆ. 2027ರ ವೇಳೆಗೆ ಭಾರತವು ಅಂತರರಾಷ್ಟ್ರೀಯ ವಿಮಾನಗಳಿಗೆ ಒದಗಿಸುವ ಇಂಧನದಲ್ಲಿ ಶೇ 1ರಷ್ಟು ಎಸ್ಎಎಫ್ ಮಿಶ್ರಣ ಮಾಡುವುದನ್ನು ಕಡ್ಡಾಯ ಮಾಡಿದೆ. ಈ ವರ್ಷದ ಅಂತ್ಯದಿಂದ ಘಟಕವು ವಾರ್ಷಿಕ 35 ಸಾವಿರ ಟನ್ ಎಸ್‌ಎಎಫ್ ಉತ್ಪಾದನೆ ಆರಂಭಿಸಲಿದೆ. ಇದು ಶೇ 1ರಷ್ಟು ಮಿಶ್ರಣವನ್ನು ಪೂರೈಸಲು ಸಾಕಾಗುತ್ತದೆ ಎಂದು ಹೇಳಿದ್ದಾರೆ.
ಎಣ್ಣೆ ಸಂಗ್ರಹ ಹೇಗೆ: ದೊಡ್ಡ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕುರುಕುಲು ಮತ್ತು ಸಿಹಿ ತಿಂಡಿ ತಯಾರಿಸುವ ಹಲ್ದಿರಾಮ್ಸ್ ಸೇರಿದಂತೆ ಅತಿಹೆಚ್ಚು ಎಣ್ಣೆ ಬಳಸುವ ಬಳಕೆದಾರರಿಂದ ಏಜೆನ್ಸಿಗಳು ಬಳಸಿದ ಎಣ್ಣೆಯನ್ನು ಸಂಗ್ರಹಿಸುತ್ತವೆ. ಇದನ್ನು ಪಾಣಿಪತ್‌ನಲ್ಲಿನ ಸಂಸ್ಕರಣಾ ಘಟಕಕ್ಕೆ ಪೂರೈಕೆ ಮಾಡಲಾಗುತ್ತದೆ. ಘಟಕವು ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ ತಯಾರಿಸಲಿದೆ ಎಂದು ಹೇಳಿದ್ದಾರೆ.
ದೊಡ್ಡ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಹಜವಾಗಿ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸುವುದಿಲ್ಲ. ಪ್ರಸ್ತುತ ಈ ಎಣ್ಣೆಯನ್ನು ಏಜೆನ್ಸಿಗಳು ಸಂಗ್ರಹಿಸಿ, ರಫ್ತು ಮಾಡುತ್ತಿವೆ.
ಬಳಸಿದ ಅಡುಗೆ ಎಣ್ಣೆಯು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಲಭ್ಯವಿದೆ. ಆದರೆ, ಸಂಗ್ರಹ ಮಾಡುವುದೇ ಸವಾಲಾಗಿದೆ. ದೊಡ್ಡ ಹೋಟೆಲ್‌ಗಳಿಂದ ಸಂಗ್ರಹಿಸುವುದು ಸುಲಭ. ಆದರೆ ಮನೆಗಳು ಸೇರಿದಂತೆ ಸಣ್ಣ ಪ್ರಮಾಣದ ಬಳಕೆದಾರರಿಂದ ಸಂಗ್ರಹಿಸಲು ಸೂಕ್ತ ಮಾರ್ಗ ಅಗತ್ಯ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.