ADVERTISEMENT

ಆರ್‌ಇಐಟಿಗಳಿಂದ ಶೇ 7.5ರಷ್ಟು ವರಮಾನ: ವರದಿ

ಪಿಟಿಐ
Published 13 ಸೆಪ್ಟೆಂಬರ್ 2025, 15:58 IST
Last Updated 13 ಸೆಪ್ಟೆಂಬರ್ 2025, 15:58 IST
   

ಸಿಂಗಪುರ: ಭಾರತದ ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳು (ಆರ್‌ಇಐಟಿ) ಹೂಡಿಕೆದಾರರಿಗೆ ಸರಾಸರಿ ಶೇಕಡ 6ರಿಂದ ಶೇ 7.5ರವರೆಗೆ ಆದಾಯ ತಂದುಕೊಡುತ್ತಿವೆ ಎಂದು ಕ್ರೆಡಾಯ್ ಮತ್ತು ಅನರಾಕ್ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ಈ ಆದಾಯ ಪ್ರಮಾಣವು ಆರ್‌ಇಐಟಿಗಳು ಹೆಚ್ಚು ವ್ಯಾಪಕವಾಗಿರುವ ಇತರ ಹಲವು ಮಾರುಕಟ್ಟೆಗಳಲ್ಲಿ ಸಿಗುವ ಆದಾಯಕ್ಕೆ ಹೋಲಿಸಿದರೆ ಉತ್ತಮವಾಗಿದೆ ಎಂದು ವರದಿಯು ಹೇಳಿದೆ. ಕ್ರೆಡಾಯ್ ಭಾರತದ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘವಾಗಿದೆ. ಅನರಾಕ್ ಸಂಸ್ಥೆಯು ಆಸ್ತಿ ಸಲಹಾ ವಲಯದಲ್ಲಿ ಕೆಲಸ ಮಾಡುತ್ತಿದೆ.

ದೇಶದಲ್ಲಿ ಈಗ ಷೇರುಪೇಟೆಯಲ್ಲಿ ಒಟ್ಟು ಐದು ಆರ್‌ಇಐಟಿಗಳು ನೋಂದಾಯಿತ ಆಗಿವೆ. ಬ್ರೂಕ್‌ಫೀಲ್ಡ್‌ ಇಂಡಿಯಾ ರಿಯಲ್ ಎಸ್ಟೇಟ್ ಟ್ರಸ್ಟ್‌, ಎಂಬಸಿ ಆಫೀಸ್ ಪಾರ್ಕ್ಸ್‌ ಆರ್‌ಇಐಟಿ, ಮೈಂಡ್‌ಸ್ಪೇಸ್‌ ಬ್ಯುಸಿನೆಸ್ ಪಾರ್ಕ್ಸ್‌ ಆರ್‌ಇಐಟಿ, ನೆಕ್ಸಸ್ ಸೆಲೆಕ್ಟ್‌ ಟ್ರಸ್ಟ್‌ ಮತ್ತು ನಾಲೆಜ್ ರಿಯಾಲ್ಟಿ ಟ್ರಸ್ಟ್‌ ಆ ಐದು ಆರ್‌ಇಐಟಿಗಳು.

ADVERTISEMENT

ನೆಕ್ಸಸ್‌ ಸೆಲೆಕ್ಟ್‌ ಟ್ರಸ್ಟ್‌, ಬಾಡಿಗೆ ವರಮಾನ ಬರುವ ರಿಯಲ್‌ ಎಸ್ಟೇಟ್‌ (ಶಾಪಿಂಗ್ ಮಾಲ್) ಆಸ್ತಿಗಳನ್ನು ಹೊಂದಿದೆ. ಇನ್ನುಳಿದ ಆರ್‌ಇಐಟಿಗಳು ಕಚೇರಿ ಸ್ಥಳಗಳನ್ನು ಹೊಂದಿವೆ.

‘ದೇಶದ ಆರ್‌ಇಐಟಿಗಳು ನೀಡುತ್ತಿರುವ ವರಮಾನದ ಸರಾಸರಿ ಪ್ರಮಾಣವು ಶೇ 6ರಿಂದ ಶೇ 7.5ರಷ್ಟು ಇದೆ. ಇದು ನಿಶ್ಚಿತ ವರಮಾನ ನೀಡುವ ಇತರ ಹೂಡಿಕೆ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿದೆ. ಆದರೆ, ಆರ್‌ಇಐಟಿಗಳಿಗೆ ಬಂಡವಾಳ ಮೌಲ್ಯದ ಹೆಚ್ಚಳ ಸಾಮರ್ಥ್ಯ ಇದೆ’ ಎಂದು ವರದಿಯು ಹೇಳಿದೆ.

‘ಭಾರತದಲ್ಲಿ ಆರ್‌ಇಐಟಿಗಳ ಆರಂಭವು ತಡವಾಗಿ ಆಗಿದ್ದರೂ, ಅವು ಈಗ ಹೆಚ್ಚು ವರಮಾನ ನೀಡುತ್ತಿವೆ’ ಎಂದು ಅನರಾಕ್ ಕ್ಯಾಪಿಟಲ್‌ನ ಸಿಇಒ ಶೋಭಿತ್ ಅಗರ್ವಾಲ್ ಹೇಳಿದ್ದಾರೆ. ಇಲ್ಲಿನ ಆರ್‌ಇಐಟಿಗಳು ನೀಡುತ್ತಿರುವ ವರಮಾನದ ಪ್ರಮಾಣವು ಸಿಂಗಪುರ, ಅಮೆರಿಕದಂತಹ ಪ್ರಬುದ್ಧ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ವರಮಾನ ಪ್ರಮಾಣಕ್ಕಿಂತ ಹೆಚ್ಚಿದೆ ಎಂದಿದ್ದಾರೆ.

ಅಮೆರಿಕದ ಆರ್‌ಇಐಟಿಗಳು ನೀಡುವ ವರಮಾನ ಪ್ರಮಾಣವು ಶೇ 2.5–3.5ರಷ್ಟು ಇದೆ. ಸಿಂಗಪುರದಲ್ಲಿ ಇದು ಶೇ 5–6ರಷ್ಟು, ಜಪಾನ್‌ನಲ್ಲಿ ಶೇ 4.5–5.5ರಷ್ಟು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.