ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಜುಲೈನಲ್ಲಿ 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ರಫ್ತು ಕಾರ್ಯಾದೇಶಗಳು ಹೆಚ್ಚಳ ಕಂಡಿದ್ದುದು, ಒಟ್ಟು ಮಾರಾಟದಲ್ಲಿ ತೀವ್ರ ಪ್ರಮಾಣದ ಏರಿಕೆ ಆಗಿದ್ದುದು ಇದಕ್ಕೆ ಕಾರಣ.
ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜುಲೈನಲ್ಲಿ 60.5ಕ್ಕೆ ತಲುಪಿದೆ. ಇದು ಜೂನ್‌ನಲ್ಲಿ 60.4ರಲ್ಲಿ ಇತ್ತು. ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಚಟುವಟಿಕೆಗಳು ಕುಗ್ಗಿವೆ ಎಂದು ಅರ್ಥೈಸಲಾಗುತ್ತದೆ.
‘ಸೂಚ್ಯಂಕವು ಜುಲೈನಲ್ಲಿ 60.5ರಲ್ಲಿ ಇರುವುದು ಬೆಳವಣಿಗೆಯನ್ನು ಹೇಳುತ್ತಿದೆ’ ಎಂದು ಎಚ್‌ಎಸ್‌ಬಿಸಿ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞರಾದ ಪ್ರಾಂಜುಳ್ ಭಂಡಾರಿ ತಿಳಿಸಿದ್ದಾರೆ.
ಜುಲೈನಲ್ಲಿ ಚಟುವಟಿಕೆಗಳು ಚುರುಕಾಗಿದ್ದರೂ, ಕಂಪನಿಗಳ ಸಾಮರ್ಥ್ಯದ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಿದ್ದರೂ, ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರಮಾಣವು ಅಷ್ಟೇನೂ ತೀವ್ರ ಆಗಿರಲಿಲ್ಲ. ಜುಲೈನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಏರಿಕೆಯು 15 ತಿಂಗಳ ಕನಿಷ್ಠ ಪ್ರಮಾಣದ ಏರಿಕೆಯಾಗಿದೆ.
‘ಕಡಿಮೆ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಿದೆ. ಶೇ 2ಕ್ಕಿಂತ ಕಡಿಮೆ ಕಂಪನಿಗಳು ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿವೆ’ ಎಂದು ಎಚ್‌ಎಸ್‌ಬಿಸಿ ಸಮೀಕ್ಷೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.