ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆಯು ಜೂನ್ ತಿಂಗಳಲ್ಲಿ ಹತ್ತು ತಿಂಗಳ ಗರಿಷ್ಠ ಮಟ್ಟ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಚೇತರಿಸಿಕೊಂಡಿರುವುದು ಬೆಳವಣಿಗೆಗೆ ಪೂರಕವಾಗಿ ಒದಗಿಬಂದಿದೆ.
ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಮೇ ತಿಂಗಳಲ್ಲಿ 58.8ರಷ್ಟು ಇದ್ದಿದ್ದು ಜೂನ್‌ನಲ್ಲಿ 60.4ಕ್ಕೆ ಹೆಚ್ಚಳ ಕಂಡಿದೆ. ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
‘ದೇಶಿ ಮಾರುಕಟ್ಟೆಯಲ್ಲಿ ಹೊಸ ಕಾರ್ಯಾದೇಶಗಳು ಬಂದಿರುವುದು ಕೂಡ ಸೂಚ್ಯಂಕದ ಏರಿಕೆಗೆ ಕಾರಣವಾಗಿದೆ. ಹೊಸ ರಫ್ತು ಕಾರ್ಯಾದೇಶಗಳು ಹೆಚ್ಚಳ ಕಂಡಿವೆ. ಲಾಭದ ಪ್ರಮಾಣವು ಹೆಚ್ಚಳ ಆಗಿದೆ’ ಎಂದು ಎಚ್‌ಎಸ್‌ಬಿಸಿ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಳ್ ಭಂಡಾರಿ ಹೇಳಿದ್ದಾರೆ.
ಏಷ್ಯಾದ ಮಾರುಕಟ್ಟೆಗಳು, ಪಶ್ಚಿಮ ಏಷ್ಯಾದ ಮಾರುಕಟ್ಟೆಗಳು, ಅಮೆರಿಕದ ಮಾರುಕಟ್ಟೆಯಲ್ಲಿ ಬೇಡಿಕೆಯು ಸುಧಾರಣೆ ಕಂಡುಬಂದಿದೆ.
ಸೇವಾ ವಲಯದ ಬೆಳವಣಿಗೆಯು ನೇಮಕಾತಿಯ ಮೇಲೆಯೂ ಉತ್ತಮ ಪರಿಣಾಮ ಉಂಟುಮಾಡಿದೆ. ಈ ವಲಯದಲ್ಲಿ ನೇಮಕಾತಿ ಹೆಚ್ಚಳ ಕಂಡಿದೆ.
ಸೇವಾ ವಲಯ ಹಾಗೂ ತಯಾರಿಕಾ ವಲಯದ ಬೆಳವಣಿಗೆಯನ್ನು ಸೂಚಿಸುವ ಕಾಂಪೊಸಿಟ್ ಪಿಎಂಐ ಔಟ್‌ಪುಟ್ ಸೂಚ್ಯಂಕವು ಮೇ ತಿಂಗಳಲ್ಲಿ 59.3 ಇದ್ದಿದ್ದು ಜೂನ್‌ನಲ್ಲಿ 61ಕ್ಕೆ ಏರಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.