ADVERTISEMENT

ಮೌಲ್ಯಯುತ ಬ್ರ್ಯಾಂಡ್‌: ಟಿಸಿಎಸ್‌ಗೆ 2ನೇ ಸ್ಥಾನ

ಸತತ ಏಳನೇ ಬಾರಿಗೆ ಅಗ್ರಸ್ಥಾನ ಕಾಯ್ದುಕೊಂಡ ಆಕ್ಸೆಂಚರ್‌

ಪಿಟಿಐ
Published 21 ಜನವರಿ 2025, 14:45 IST
Last Updated 21 ಜನವರಿ 2025, 14:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಐ.ಟಿ ಸೇವಾ ವಲಯದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳಲ್ಲಿ ದೇಶದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), ಇನ್ಫೊಸಿಸ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ವಿಪ್ರೊ ಮತ್ತು ಟೆಕ್‌ ಮಹೀಂದ್ರ ಕಂಪನಿಗಳು ಸ್ಥಾನ ಪಡೆದಿವೆ.

ಈ ಕುರಿತು ಬ್ರ್ಯಾಂಡ್‌ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರ್ಯಾಂಡ್‌ ಫೈನಾನ್ಸ್‌ ಮಂಗಳವಾರ ವರದಿಯನ್ನು ಬಿಡುಗಡೆ ಮಾಡಿದೆ. 

ವಿಶ್ವದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಸತತ ಏಳನೇ ಬಾರಿಗೆ ಆಕ್ಸೆಂಚರ್‌ ಕಂಪನಿಯು ಅಗ್ರಸ್ಥಾನ ಕಾಯ್ದುಕೊಂಡಿದೆ. ಟಿಸಿಎಸ್‌ ಕಂಪನಿಯು ಸತತ ನಾಲ್ಕನೇ ವರ್ಷವೂ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿದೆ. 

ADVERTISEMENT

ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯು 2025ರಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಐ.ಟಿ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ಐದು ವರ್ಷಗಳಲ್ಲಿ ಅತಿಹೆಚ್ಚು ವಾರ್ಷಿಕ ಬೆಳವಣಿಗೆ ದರ ದಾಖಲಿಸಿದ ಕಂಪನಿಯಲ್ಲಿ ಇನ್ಫೊಸಿಸ್‌ ಮೊದಲ ಸ್ಥಾನ ಪಡೆದಿದೆ.

ಅತಿಹೆಚ್ಚು ಬ್ರ್ಯಾಂಡ್‌ ಮೌಲ್ಯ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನ ‍ಪಡೆದಿದೆ. ಒಟ್ಟು ಬ್ರ್ಯಾಂಡ್‌ ಮೌಲ್ಯದ ಪಾಲು ಶೇ 40ರಷ್ಟಿದೆ. ಶೇ 36ರಷ್ಟು ಪಾಲು ಹೊಂದಿರುವ ಭಾರತವು ದ್ವಿತೀಯ ಸ್ಥಾನ ಪಡೆದಿದೆ. 

ಹೆಕ್ಸಾವೇರ್‌ ಟೆಕ್ನಾಲಜೀಸ್ ಕಂಪನಿಯು ವಿಶ್ವದ ಪ್ರಮುಖ 25 ಐ.ಟಿ ಸೇವಾ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 

ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರ, ಅತಿಹೆಚ್ಚು ಬಡ್ಡಿದರದಿಂದಾಗಿ ಕಾರ್ಪೊರೇಟ್‌ ವೆಚ್ಚ ಪ್ರಮಾಣವು ಮಂದಗತಿಯಲ್ಲಿತ್ತು. ಕೃತಕ ಬುದ್ಧಿಮತ್ತೆ ಮಾರುಕಟ್ಟೆಯ ವಿಸ್ತರಣೆಯಾಗಿದೆ. ಇದರಿಂದ ಎ.ಐ ಸಂಬಂಧಿತ ಸೇವೆಗಳನ್ನು ‍ಪಡೆಯಲು ಐ.ಟಿ ಕಂಪನಿಗಳಿಗೆ ನೆರವಾಗಿದೆ ಎಂದು ವರದಿ ಹೇಳಿದೆ.

ಪ್ರಸಕ್ತ ವರ್ಷದಲ್ಲಿ ಐ.ಟಿ ಕಂಪನಿಗಳು ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತದ ಲಾಭ ಪಡೆದಿವೆ. ಕಾರ್ಪೊರೇಟ್‌ ವಲಯದ ಖರ್ಚಿನ ಪ್ರಮಾಣವೂ ಏರಿಕೆಯಾಗಿದೆ ಎಂದು ತಿಳಿಸಿದೆ.

ಕಂಪನಿ;ಬ್ರ್ಯಾಂಡ್‌ ಮೌಲ್ಯ

ಆಕ್ಸೆಂಚರ್‌;₹3.59 ಲಕ್ಷ ಕೋಟಿ

ಟಿಸಿಎಸ್‌;₹1.84 ಲಕ್ಷ ಕೋಟಿ

ಇನ್ಫೊಸಿಸ್‌;‌₹1.41 ಲಕ್ಷ ಕೋಟಿ

ಎಚ್‌ಸಿಎಲ್‌ ಟೆಕ್‌–₹77,000 ಕೋಟಿ

ವಿಪ್ರೊ;₹52,000 ಕೋಟಿ ಟೆಕ್‌ ಮಹೀಂದ್ರ;29,000 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.