ADVERTISEMENT

ಭಾರತದ ಆರ್ಥಿಕತೆಯ ಚೇತರಿಕೆ ಸಾಮರ್ಥ್ಯ ಹೆಚ್ಚಿದೆ: ವಿಶ್ವಸಂಸ್ಥೆ

ಪಿಟಿಐ
Published 29 ಡಿಸೆಂಬರ್ 2020, 16:00 IST
Last Updated 29 ಡಿಸೆಂಬರ್ 2020, 16:00 IST
   

ವಿಶ್ವಸಂಸ್ಥೆ: ದಕ್ಷಿಣ ಮತ್ತು ನೈರುತ್ಯ ಏಷ್ಯಾದ ದೇಶಗಳ ಸಾಲಿನಲ್ಲಿ ಭಾರತದ ಆರ್ಥಿಕತೆಗೆ ಚೇತರಿಸಿಕೊಳ್ಳುವ ಹೆಚ್ಚಿನ ಸಾಮರ್ಥ್ಯ ಇದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಕೊರೊನೋತ್ತರದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಸಕಾರಾತ್ಮಕವಾಗಿದ್ದರೂ ಕಡಿಮೆ ಮಟ್ಟದಲ್ಲಿ ಇರಲಿದೆ. ದೇಶದ ಮಾರುಕಟ್ಟೆಯು ಹೂಡಿಕೆಯನ್ನು ಆಕರ್ಷಿಸುವುದು ಮುಂದುವರಿಸಲಿದೆ ಎಂದು ತಿಳಿಸಿದೆ.

ದಕ್ಷಿಣ ಮತ್ತು ನೈರುತ್ಯ ಏಷ್ಯಾಕ್ಕೆ 2018ರಲ್ಲಿ ₹ 4.95 ಲಕ್ಷ ಕೋಟಿ ಎಫ್‌ಡಿಐ ಹರಿದುಬಂದಿತ್ತು. 2019ರಲ್ಲಿ ಶೇ 2ರಷ್ಟು ಇಳಿಕೆ ಆಗಿದ್ದು, ₹ 4.88 ಲಕ್ಷ ಕೋಟಿಗಳಷ್ಟಾಗಿದೆ ಎಂದು ದಕ್ಷಿಣ ಮತ್ತು ನೈರುತ್ಯ ಏಷ್ಯಾದಲ್ಲಿ ವಿದೇಶಿ ನೇರ ಹೂಡಿಕೆಯ ದಿಕ್ಕು ಮತ್ತು ಮುನ್ನೋಟ ಎನ್ನುವ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ದಕ್ಷಿಣ ಮತ್ತು ನೈರುತ್ಯ ಏಷ್ಯಾದಲ್ಲಿ ಆಗಿರುವ ಒಟ್ಟಾರೆ ಹೂಡಿಕೆಯಲ್ಲಿ ಭಾರತದ ಪಾಲು ಶೇ 77ರಷ್ಟಿದೆ . ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಹಾಗೂ ಉಪ ವಲಯಗಳ ನಿರ್ಮಾಣದ ಉದ್ದೇಶಕ್ಕಾಗಿಯೇ ಬಹುಪಾಲು ಎಫ್‌ಡಿಐ ಹರಿದುಬಂದಿದೆ.

2025ರಲ್ಲಿ ಐ.ಟಿ ಮತ್ತು ಬಿಸಿನೆಸ್ ಪ್ರೊಸೆಸ್‌ ಮ್ಯಾನೇಜ್‌ಮೆಂಟ್‌, ಡಿಜಿಟಲ್‌ ಸಂವಹನ ಸೇವೆಗಳು ಹಾಗು ಎಲೆಕ್ಟ್ರಾನಿಕ್ಸ್‌ ತಯಾರಿಕಾ ವಲಯಗಳು ಗಾತ್ರದಲ್ಲಿ ಎರಡರಷ್ಟು ಬೆಳವಣಿಗೆ ಸಾಧಿಸಲಿವೆ. ಜಾಗತಿಕ ಕಂಪನಿಗಳು ಸ್ವಾಧೀನಕ್ಕೆ ಆಸಕ್ತಿ ತೋರುವುದರಿಂದ ಭಾರತದಲ್ಲಿ ದೂರಸಂಪರ್ಕ ಮತ್ತು ಡಿಜಿಟಲ್‌ ವಲಯವು ವೇಗವಾಗಿ ಚೇತರಿಕೆ ಕಾಣುವ ನಿರೀಕ್ಷೆ ಮಾಡಲಾಗಿದೆ. ಜಿಯೊದಲ್ಲಿ ಫೇಸ್‌ಬುಕ್‌ ಮತ್ತು ಗೂಗಲ್‌ ಮಾಡಿರುವ ಹೂಡಿಕೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.