ADVERTISEMENT

ಅಡುಗೆ ಎಣ್ಣೆ ಆಮದು ಕುಸಿತ: ನಾಲ್ಕು ವರ್ಷದ ಕನಿಷ್ಠಕ್ಕೆ ಆಮದು ಪ್ರಮಾಣ ಇಳಿಕೆ

ಪಿಟಿಐ
Published 11 ಮಾರ್ಚ್ 2025, 16:03 IST
Last Updated 11 ಮಾರ್ಚ್ 2025, 16:03 IST
ಅಡುಗೆ ಎಣ್ಣೆ
ಅಡುಗೆ ಎಣ್ಣೆ   

ಮುಂಬೈ/ನವದೆಹಲಿ: ದೇಶದ ಅಡುಗೆ ಎಣ್ಣೆ ಆಮದು ಪ್ರಮಾಣ ಫೆಬ್ರುವರಿಯಲ್ಲಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಮಂಗಳವಾರ ತಿಳಿಸಿದೆ.

‘ಅತ್ಯುತ್ತಮ ಗುಣಮಟ್ಟದ ಅಡುಗೆ ಎಣ್ಣೆಯ ದರದಲ್ಲಿ ವಿಪರೀತ ಏರಿಕೆಯಾಗಿದೆ. ಇದರಿಂದಾಗಿ ಜನರ ಬಳಕೆ ಮತ್ತು ಬೇಡಿಕೆ ಎರಡೂ ಕುಸಿದಿದೆ. ಪರಿಣಾಮವಾಗಿ ಆಮದು ಕಡಿಮೆಯಾಗಿದೆ’ ಎಂದು ಎಸ್‌ಇಎ ತಿಳಿಸಿದೆ.

2024ರ ಫೆಬ್ರುವರಿಯಲ್ಲಿ ಒಟ್ಟು 9.58 ಲಕ್ಷ ಟನ್‌ಗಳಷ್ಟು ಅಡುಗೆ ಎಣ್ಣೆ ಆಮದಾಗಿತ್ತು. ಈ ಫೆಬ್ರುವರಿಯಲ್ಲಿ 8.85 ಲಕ್ಷ ಟನ್‌ಗಳಷ್ಟು ಆಮದಾಗಿದ್ದು, ಶೇ 8ರಷ್ಟು ಕುಸಿತ ಕಂಡಿದೆ. ತಾಳೆ ಎಣ್ಣೆ ಆಮದಿನಲ್ಲಿ ಏರಿಕೆಯಾಗಿದ್ದರೂ ಸೋಯಾ ಎಣ್ಣೆ ಆಮದು ಶೇ 36ರಷ್ಟು (2.83 ಲಕ್ಷ ಟನ್) ಮತ್ತು ಸೂರ್ಯಕಾಂತಿ ಎಣ್ಣೆ ಶೇ 20ರಷ್ಟು (2.28 ಲಕ್ಷ ಟನ್‌) ಕುಸಿದಿದೆ. ಪರಿಣಾಮವಾಗಿ ಒಟ್ಟಾರೆ ಆಮದು ಕುಸಿದಿದೆ. 

ADVERTISEMENT

ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಕುಸಿದ ಕಾರಣದಿಂದ, ದೇಶದ ಅಡುಗೆ ಎಣ್ಣೆ ದಾಸ್ತಾನು ಮಾರ್ಚ್‌ 1ರ ವೇಳೆಗೆ ಶೇ 14ರಷ್ಟು ಕಡಿಮೆಯಾಗಿ, 18.70 ಲಕ್ಷ ಟನ್‌ ಆಗಿದೆ. ಇದು ಮೂರು ವರ್ಷದ ಕನಿಷ್ಠ. 

2024ರ ನವೆಂಬರ್‌ನಿಂದ 2025ರ ಅಕ್ಟೋಬರ್‌ವರೆಗಿನ ತೈಲ ಮಾರುಕಟ್ಟೆ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಸಸ್ಯಜನ್ಯ ತೈಲ ಆಮದು 48.07 ಲಕ್ಷ ಟನ್‌ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 46.38 ಲಕ್ಷ ಟನ್‌ ಇತ್ತು ಎಂದು ತಿಳಿಸಿದೆ.

ಭಾರತವು ತಾಳೆ ಎಣ್ಣೆಯನ್ನು ಇಂಡೊನೇಷ್ಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್‌ದಿಂದ ಖರೀದಿಸುತ್ತದೆ. ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೀನಾ, ಬ್ರೆಜಿಲ್‌, ರಷ್ಯಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತದೆ.

ಪ್ರಸಕ್ತ ವರ್ಷದ ತೈಲ ಮಾರುಕಟ್ಟೆ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ತಾಳೆ ಎಣ್ಣೆ ಆಮದು ಪ್ರಮಾಣ ಶೇ 43ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ಹೆಚ್ಚಿದ ತಾಳೆ ಎಣ್ಣೆ ಬೆಲೆಯು ಇತ್ತೀಚಿನ ತಿಂಗಳುಗಳಲ್ಲಿ ಆಮದು ಮತ್ತು ಬಳಕೆ ಎರಡನ್ನೂ ಕಡಿಮೆ ಮಾಡಿದೆ. ಇದು ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಬಳಕೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.

ಉದ್ಯಮವು ದಾಸ್ತಾನು ಪ್ರಮಾಣ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದರಿಂದ ಮಾರ್ಚ್ ತಿಂಗಳಲ್ಲಿ ತಾಳೆ ಎಣ್ಣೆ ಮತ್ತು ಸೋಯಾ ಎಣ್ಣೆ ಆಮದು ಸುಧಾರಣೆಗೊಳ್ಳುವ ನಿರೀಕ್ಷೆ ಇದೆ ಎಂದು ಅಡುಗೆ ಎಣ್ಣೆ ವ್ಯಾಪಾರಿ ಜಿಜಿಎನ್‌ ರಿಸರ್ಚ್‌ನ ವ್ಯವಸ್ಥಾಪಕ ಪಾಲುದಾರ ರಾಜೇಶ್‌ ಪಟೇಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.