ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಕೃಷಿ ವಲಯದ ಬೆಳವಣಿಗೆ ಶೇ 3.5ರಷ್ಟಾಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಹೇಳಿದ್ದಾರೆ.
ಜಾಗತಿಕವಾಗಿ ಕೃಷಿ ವಲಯದ ಬೆಳವಣಿಗೆ ಶೇ 1.5ರಿಂದ ಶೇ 2ರಷ್ಟು ಇರುವುದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಭಾರತ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 3ರಿಂದ ಶೇ 3.5ರಷ್ಟು ದಾಖಲಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಈ ಬಾರಿ ಮುಂಗಾರು ಚುರುಕಾಗಿದ್ದು, ಕೇರಳಕ್ಕೆ ಮೇ 27ರ ವೇಳೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಜೂನ್ 1ರಂದು ಪ್ರವೇಶಿಸಬೇಕಿತ್ತು. ಆದರೆ, ಐದು ದಿನದ ಮುಂಚೆ ಪ್ರವೇಶಿಸುತ್ತಿದ್ದು, ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ 29ರಿಂದ ಅಭಿಯಾನ: ಮೇ 29ರಿಂದ ದೇಶದಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. 15 ದಿನಗಳವರೆಗೆ ನಡೆಯುವ ಈ ಅಭಿಯಾನದಡಿ ದೇಶದಾದ್ಯಂತ 1.30 ಕೋಟಿ ರೈತರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ. ಈ ವೇಳೆ ರೈತರಿಗೆ ಆಧುನಿಕ ತಂತ್ರಜ್ಞಾನ ಮತ್ತು ಹೊಸ ಬಿತ್ತನೆ ತಳಿಗಳ ಬಗ್ಗೆ ಅರಿವು ಮೂಡಿಸಲಿದೆ. ಆ ಮೂಲಕ ಮುಂಗಾರು ಅವಧಿಯಲ್ಲಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಅಭಿಯಾನದ ಭಾಗವಾಗಿ 65 ಸಾವಿರ ಹಳ್ಳಿಗಳನ್ನು ತಲುಪಲಾಗುವುದು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) 3,749 ಕೃಷಿ ವಿಜ್ಞಾನಿಗಳು ಮತ್ತು 2,980 ಕೃಷಿ ವಿಜ್ಞಾನದ ಕೇಂದ್ರದ ಸಿಬ್ಬಂದಿ ಒಳಗೊಂಡ 2,170 ತಂಡವು ಪ್ರತಿ ದಿನ ಕನಿಷ್ಠ ಮೂರು ಪಂಚಾಯಿತಿಗೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.