ADVERTISEMENT

ಇಂಧನ ಬೇಡಿಕೆ ಸಹಜ ಸ್ಥಿತಿಗೆ 6–9 ತಿಂಗಳು ಬೇಕು: ಐಒಸಿ

ಪಿಟಿಐ
Published 4 ಆಗಸ್ಟ್ 2020, 16:12 IST
Last Updated 4 ಆಗಸ್ಟ್ 2020, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಮುಂದುವರಿದಿರುವುದರಿಂದ ದೇಶದ ಇಂಧನ ಬೇಡಿಕೆ ಸಹಜ ಸ್ಥಿತಿಗೆ ಮರಳಲು ಆರರಿಂದ ಒಂಬತ್ತು ತಿಂಗಳು ಬೇಕಾಗಲಿದೆ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ (ಐಒಸಿ) ಹಣಕಾಸು ವಿಭಾಗದ ನಿರ್ದೇಶಕ ಎಸ್‌.ಕೆ. ಗುಪ್ತಾ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಇಂಧನ ಮಾರಾಟ ಶೇಕಡ 45.8ರಷ್ಟು ಗರಿಷ್ಠ ಕುಸಿತ ಕಂಡಿತ್ತು. ಮೇ ತಿಂಗಳ ಆರಂಭದಿಂದ ಲಾಕ್‌ಡೌನ್‌ ನಿರ್ಬಂಧಗಳ ಸಡಿಲಿಕೆ ಆರಂಭವಾಗಿದೆ. ಆದರೆ, ಕೋವಿಡ್–19‌ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಕೆಲವು ರಾಜ್ಯಗಳು ಮತ್ತೆ ಲಾಕ್‌ಡೌನ್ ಜಾರಿಗೊಳಿಸುತ್ತಿವೆ.

‘ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದರೆ ಇಂಧನ ಬೇಡಿಕೆ ಚೇತರಿಸಿಕೊಳ್ಳುವ ಬಗ್ಗೆ ಅಂದಾಜು ಮಾಡುವುದು ಕಷ್ಟವಾಗುತ್ತಿದೆ’ ಎಂದು ಅವರು ಹೂಡಿಕೆದಾರರ ಜತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ. ಮೇನಲ್ಲಿ ಚೇತರಿಸಿಕೊಂಡಿದ್ದ ಬೇಡಿಕೆಯು ಜೂನ್‌ನ ದ್ವಿತೀಯಾರ್ಧದಲ್ಲಿ ಮತ್ತೆ ಇಳಿಕೆ ಕಂಡಿದೆ.

ADVERTISEMENT

ಡೀಸೆಲ್‌ ಬೇಡಿಕೆಯು ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಶೇ 13ರಷ್ಟು ಇಳಿಕೆಯಾಗಿದೆ. 2019ರ ಜುಲೈಗೆ ಹೋಲಿಸಿದರೆ ಶೇ 21ರಷ್ಟು ಕಡಿಮೆ ಬೇಡಿಕೆ ಬಂದಿದೆ. ಪೆಟ್ರೋಲ್‌ ಮಾರಾಟ ಶೇ 1ರಷ್ಟು ಅಲ್ಪ ಇಳಿಕೆ ಕಂಡಿದೆ. 2019ರ ಜುಲೈಗೆ ಹೋಲಿಸಿದರೆ ಶೇ 11.5ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.