ADVERTISEMENT

ಸಹಜ ಸ್ಥಿತಿಯತ್ತ ಇಂಧನ ಬೇಡಿಕೆ: ಸಚಿವ ಧರ್ಮೇಂದ್ರ ಪ್ರಧಾನ್‌

ಜೂನ್‌ 15ರವರೆಗೆ ಶೇ 80–85ರಷ್ಟು ಬೇಡಿಕೆ

ಪಿಟಿಐ
Published 16 ಜೂನ್ 2020, 11:41 IST
Last Updated 16 ಜೂನ್ 2020, 11:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಇಂಧನ ಬೇಡಿಕೆಯು ಕೋವಿಡ್‌ ಬಿಕ್ಕಟ್ಟಿಗಿಂತಲೂ ಮೊದಲಿದ್ದ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿದೆ. ಜೂನ್‌ 1–15ರ ಅವಧಿಯಲ್ಲಿ ಶೇ 80–85ರಷ್ಟು ಬೇಡಿಕೆ ಬಂದಿದೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಇಂಧನ ಮಾರಾಟವು 2007ರ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿತ್ತು.

ಲಾಕ್‌ಡೌನ್‌ ಅವಧಿಯಲ್ಲಿ ಶೇ 70ರಷ್ಟು ಕುಸಿದಿತ್ತು. ಮೇನಲ್ಲಿ ಲಾಕ್‌ಡೌನ್‌ ನಿರ್ಬಂಧಗಳಿಂದ ವಿನಾಯಿತಿ ನೀಡಲು ಆರಂಭಿಸಿದ ಬಳಿಕ ಇಂಧನ ಬೇಡಿಕೆ ಚೇತರಿಕೆ ಕಾಣಲು ಆರಂಭಿಸಿದೆ.

ADVERTISEMENT

ಇಂಧನ ಬಳಕೆಯು ಮೇನಲ್ಲಿ 1.46 ಕೋಟಿ ಟನ್‌ಗಳಷ್ಟಿತ್ತು. ಏಪ್ರಿಲ್‌ಗೆ ಹೊಲಿಸಿದರೆ ಶೇ 47.4ರಷ್ಟು ಏರಿಕೆಯಾಗಿದೆ. ಆದರೆ 2019ರ ಮೇ ತಿಂಗಳಿಗೆ ಹೋಲಿಸಿದರೆ ಶೇ 23.3ರಷ್ಟು ಇಳಿಕೆ ಕಂಡಿದೆ.

ಮೇನಲ್ಲಿ ಡೀಸೆಲ್‌ ಬಳಕೆಯು ಶೇ 29.4ರಷ್ಟು ಹಾಗೂ ಪೆಟ್ರೋಲ್‌ ಬಳಕೆಯು ಶೇ 35.3ರಷ್ಟು ಇಳಿಕೆ ಕಂಡಿತ್ತು.

ಜೂನ್‌ 1–15ರವರೆಗೆ ಡೀಸೆಲ್‌ ಬೇಡಿಕೆ 26 ಲಕ್ಷ ಟನ್‌ಗಳಷ್ಟಾಗಿದೆ. 2019ಕ್ಕೆ ಹೋಲಿಸಿದರೆ ಶೇ 15ರಷ್ಟು ಕಡಿಮೆ ಇದೆ. ಪೆಟ್ರೋಲ್‌ ಮಾರಾಟ 9.30 ಲಕ್ಷ ಟನ್‌ಗಳಷ್ಟಿದ್ದು, ಕಳೆದ ವರ್ಷಕ್ಕಿಂತ ಶೇ 18ರಷ್ಟು ಕಡಿಮೆಯಾಗಿದೆ.

‘ದೇಶದಲ್ಲಿ ಇಂಧನ ಬೇಡಿಕೆಯು ಪ್ರಗತಿಯ ಹಾದಿಗೆ ಮರಳಲು ಎರಡು ವರ್ಷಗಳು ಬೇಕಾಗಲಿವೆ’ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.