
ಮುಂಬೈ: ಅಕ್ಟೋಬರ್ ತಿಂಗಳಲ್ಲಿ ಭಾರತದ ರತ್ನ ಹಾಗೂ ಆಭರಣಗಳ ರಫ್ತು ಮೌಲ್ಯವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 30.57ರಷ್ಟು ಕಡಿಮೆ ಆಗಿ, ₹19,172 ಕೋಟಿಗೆ ತಲುಪಿದೆ .
ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಈ ವಲಯದ ಒಟ್ಟು ರಫ್ತು ಮೌಲ್ಯವು ₹26,237 ಕೋಟಿ ಆಗಿತ್ತು ಎಂದು ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಹೇಳಿದೆ.
‘ಅಮೆರಿಕವು ಭಾರತದ ಸರಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸುವ ಮೊದಲೇ ರತ್ನ ಹಾಗೂ ಆಭರಣಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಲಾಗಿತ್ತು. ಇದು ಅಕ್ಟೋಬರ್‌ನಲ್ಲಿ ಇಲ್ಲಿಂದ ರಫ್ತು ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ. ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿನ ಚಂಚತೆಯು ಅವುಗಳ ರಫ್ತನ್ನು ಕಡಿಮೆ ಮಾಡಿದೆ’ ಎಂದು ಜಿಜೆಇಪಿಸಿ ಅಧ್ಯಕ್ಷ ಕಿರೀಟ್ ಭನ್ಸಾಲಿ ಹೇಳಿದ್ದಾರೆ.
ಚೀನಾದ ಮಾರುಕಟ್ಟೆಗಳು ಸುಧಾರಣೆ ಕಾಣುತ್ತಿರುವ ಕಾರಣದಿಂದಾಗಿ ನವೆಂಬರ್‌ನಲ್ಲಿ ರಫ್ತು ಪ್ರಮಾಣವು ಮತ್ತೆ ಸುಧಾರಿಸುವ ನಿರೀಕ್ಷೆ ಇದೆ. ಇತರ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಒಳ್ಳೆಯ ಬೇಡಿಕೆ ಇರುತ್ತದೆ ಎಂದು ಭನ್ಸಾಲಿ ಹೇಳಿದ್ದಾರೆ.
ಕತ್ತರಿಸಿದ ಹಾಗೂ ಪಾಲಿಶ್ ಮಾಡಿರುವ ವಜ್ರಗಳ ರಫ್ತು ಪ್ರಮಾಣವು ಅಕ್ಟೋಬರ್‌ನಲ್ಲಿ ಶೇ 26.97ರಷ್ಟು ಕಡಿಮೆ ಆಗಿದ್ದು₹9,071 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವರ್ಗದ ವಜ್ರಗಳ ರಫ್ತು ₹11,806 ಕೋಟಿಯಷ್ಟು ಇತ್ತು.
ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ, ಪಾಲಿಶ್ ಮಾಡಿರುವ ವಜ್ರಗಳ ರಫ್ತು ಕೂಡ ಶೇ 34.90ರಷ್ಟು ಕಡಿಮೆ ಆಗಿದ್ದು, ₹834 ಕೋಟಿಗೆ ತಲುಪಿದೆ. ಚಿನ್ನದ ಆಭರಣಗಳ ರಫ್ತು ಪ್ರಮಾಣ ಶೇ 28.4ರಷ್ಟು ಕಡಿಮೆ ಆಗಿ ₹7,520 ಕೋಟಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.