ನವದೆಹಲಿ: ರಷ್ಯಾದಿಂದ ಭಾರತಕ್ಕೆ ಆಮದಾಗುವ ಕಚ್ಚಾ ತೈಲದ ಪ್ರಮಾಣವು ಮೇ ತಿಂಗಳಿನಲ್ಲಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಕೆಪ್ಲೆರ್ ವರದಿ ಮಂಗಳವಾರ ತಿಳಿಸಿದೆ.
ಮೇ ತಿಂಗಳಲ್ಲಿ ಪ್ರತಿ ದಿನ 19.6 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದಾಗಿದೆ. ರಷ್ಯಾದ ಕಚ್ಚಾ ತೈಲವು ರಿಯಾಯಿತಿ ದರದಲ್ಲಿ ಸಿಗುತ್ತಿರುವುದು ಆಮದು ಹೆಚ್ಚಳಕ್ಕೆ ಒಂದು ಕಾರಣ.
ಭಾರತವು ಜಗತ್ತಿನ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆ ರಾಷ್ಟ್ರವಾಗಿದೆ. ರಷ್ಯಾವು ಭಾರತದ ಅತಿದೊಡ್ಡ ಕಚ್ಚಾತೈಲ ಪೂರೈಕೆ ರಾಷ್ಟ್ರವಾಗಿದ್ದು, ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದಲ್ಲಿ ಶೇ 38ರಷ್ಟು ರಷ್ಯಾದಿಂದ ಬಂದಿದೆ. ಇರಾಕ್ ಪ್ರತಿ ದಿನ 12 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಕೆ ಮಾಡುತ್ತಿದೆ.
2022ರ ಫೆಬ್ರುವರಿಯಲ್ಲಿ ರಷ್ಯಾ–ಉಕ್ರೇನ್ ನಡುವೆ ಯುದ್ಧ ಆರಂಭವಾಯಿತು. ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿದವು. ಯುರೋಪಿನ ಹಲವು ರಾಷ್ಟ್ರಗಳು ತೈಲ ಖರೀದಿಯಿಂದ ದೂರ ಸರಿದವು. ಹೀಗಾಗಿ, ರಷ್ಯಾ ಜಾಗತಿಕ ಮಾರುಕಟ್ಟೆಯಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಮಾರಾಟ ಮಾಡಲು ಮುಂದಾಯಿತು. ಭಾರತವು ಈ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿತು.
ಪ್ರತಿ ಬ್ಯಾರೆಲ್‌ಗೆ ಕೆಲವೊಮ್ಮೆ ಮಾರುಕಟ್ಟೆ ದರಕ್ಕಿಂತಲೂ 18ರಿಂದ 20 ಡಾಲರ್‌ನಷ್ಟು ರಿಯಾಯಿತಿ ದರದಲ್ಲಿ ಕಚ್ಚಾ ತೈಲ ದೊರೆಯುತ್ತಿತ್ತು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.