ADVERTISEMENT

ತಾಳೆ ಎಣ್ಣೆ ಆಮದು ಶೇ 21ರಷ್ಟು ಹೆಚ್ಚಳ

ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದಿಗೆ ಅಡ್ಡಿ

ರಾಯಿಟರ್ಸ್
Published 4 ಏಪ್ರಿಲ್ 2022, 12:19 IST
Last Updated 4 ಏಪ್ರಿಲ್ 2022, 12:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತಾಳೆ ಎಣ್ಣೆ ಆಮದು ಪ್ರಮಾಣವು ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇಕಡ 21ರಷ್ಟು ಏರಿಕೆ ಆಗಿದೆ. ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಖರೀದಿಸಲು ಸಾಧ್ಯವಾಗದೇ ಇರುವುದರಿಂದ ವ್ಯಾಪಾರಿಗಳು ಅದಕ್ಕೆ ಪರ್ಯಾಯವಾಗಿ ಬೇರೆ ಅಡುಗೆ ಎಣ್ಣೆ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ತಾಳೆ ಎಣ್ಣೆ ಆಮದು ಹೆಚ್ಚಾಗಿದೆ ಎಂದು ವಿತರಕರು ತಿಳಿಸಿದ್ದಾರೆ.

ದಕ್ಷಿಣ ಅಮೆರಿಕದಲ್ಲಿ ಸೋಯಾ ಎಣ್ಣೆ ಉತ್ಪಾದನೆ ಕಡಿಮೆ ಆಗಿದೆ. ಇದರಿಂದಾಗಿ, ಉಕ್ರೇನ್‌ನಿಂದ ತರಿಸುವ ಸೂರ್ಯಕಾಂತಿ ಎಣ್ಣೆಗೆ ಪರ್ಯಾಯವಾಗಿ ಸೋಯಾ ಎಣ್ಣೆ ಮೇಲೆ ಅವಲಂಬಿತವಾಗುವ ವಿಚಾರದಲ್ಲಿ ಭಾರತಕ್ಕೆ ಮಿತಿ ಹೇರಿದಂತೆ ಆಗಿದೆ.

ಫೆಬ್ರುವರಿಯಲ್ಲಿ 4.54 ಲಕ್ಷ ಟನ್‌ ತಾಳೆ ಎಣ್ಣೆ ಆಮದಾಗಿತ್ತು. ಇದು ಮಾರ್ಚ್‌ನಲ್ಲಿ 5.50 ಲಕ್ಷ ಟನ್‌ಗಳಿಗೆ ಏರಿಕೆ ಆಗಿದೆ ಎಂದು ಜಾಗತಿಕ ವ್ಯಾಪಾರ ಕಂಪನಿಯಲ್ಲಿ ಇರುವ ಮುಂಬೈ ಮೂಲದ ವಿತರಕರೊಬ್ಬರು ತಿಳಿಸಿದ್ದಾರೆ.

ADVERTISEMENT

ರಷ್ಯಾವು ಉಕ್ರೇನ್‌ ಮೇಲಿನ ದಾಳಿಯನ್ನು ಮುಂದುವರಿಸಿರುವುದರಿಂದ ಸೂರ್ಯಕಾಂತಿ ಎಣ್ಣೆ ಆಮದು ಕಡಿಮೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಏಪ್ರಿಲ್‌ನಲ್ಲಿಯೂ ತಾಳೆ ಎಣ್ಣೆ ಆಮದು ಹೆಚ್ಚಿನ ಮಟ್ಟದಲ್ಲಿಯೇ ಇರಲಿದೆ ಎಂದು ಜಿ.ಜಿ. ಪಟೇಲ್‌ ಆ್ಯಂಡ್‌ ನಿಖಿಲ್‌ ರಿಸರ್ಚ್‌ ಕೊ.ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ್‌ಭಾಯ್‌ ಪಟೇಲ್‌ ಹೇಳಿದ್ದಾರೆ.

ಭಾರತವು ಫೆಬ್ರುವರಿಯಲ್ಲಿ 1.52 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಂಡಿದೆ. ಮಾರ್ಚ್‌ನಲ್ಲಿ 2.10 ಲಕ್ಷ ಟನ್‌ಗಳಿಗೆ ಏರಿಕೆ ಆಗಿದೆ. ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರುವುದಕ್ಕೂ ಮೊದಲೇ ಕೆಲವು ಹಡಗುಗಳು ಉಕ್ರೇನ್‌ನಿಂದ ಹೊರಟಿದ್ದವು. ಹೀಗಾಗಿ ಈ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಪಟೇಲ್‌ ಮಾಹಿತಿ ನೀಡಿದ್ದಾರೆ.

ಸದ್ಯ, ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆ ನಿಂತಿದೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾ ಮತ್ತು ಅರ್ಜೆಂಟೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿವೆ. ಆದರೆ, ಕೆಲವೊಂದು ಮಿತಿಗಳಿವೆ; ಪ್ರತಿ ತಿಂಗಳಿಗೆ 1 ಲಕ್ಷ ಟನ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಬೇಡಿಕೆ ಇರುವುದು 2 ಲಕ್ಷ ಟನ್‌ಗಳಿಗೆ ಎಂದು ಅಡುಗೆ ಎಣ್ಣೆಗಳ ದಲ್ಲಾಳಿ ಮತ್ತು ಸಲಹಾ ಸಂಸ್ಥೆ ಸನ್‌ವಿನ್‌ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ತಿಳಿಸಿದ್ದಾರೆ.

ಭಾರತವು ಗರಿಷ್ಠ ಬೆಲೆಗೆ ರಷ್ಯಾದ 45 ಸಾವಿರ ಟನ್‌ ಸೂರ್ಯಕಾಂತಿ ಎಣ್ಣೆ ಖರೀದಿಗೆ ಗುತ್ತಿಗೆ ನೀಡಿದೆ. ಏಪ್ರಿಲ್‌ನಲ್ಲಿ ಪೂರೈಕೆ ಆಗಲಿದೆ.

ಮುಖ್ಯಾಂಶಗಳು

ಏಪ್ರಿಲ್‌ನಲ್ಲಿಯೂ ತಾಣೆ ಎಣ್ಣೆ ಆಮದು ಹೆಚ್ಚಳ ನಿರೀಕ್ಷೆ

ಮಾರ್ಚ್‌ನಲ್ಲಿ ಸೋಯಾ ಎಣ್ಣೆ ಆಮದು ಶೇ 18ರಷ್ಟು ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.