ADVERTISEMENT

ಫೆಬ್ರುವರಿಯಲ್ಲಿ ದೇಶದಲ್ಲಿ ಇಂಧನಗಳ ಬಳಕೆಯಲ್ಲಿ ಇಳಿಕೆ

ಪಿಟಿಐ
Published 12 ಮಾರ್ಚ್ 2021, 15:47 IST
Last Updated 12 ಮಾರ್ಚ್ 2021, 15:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಇಂಧನಗಳ ಬಳಕೆಯಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಇಳಿಕೆ ಕಂಡುಬಂದಿದೆ. ಪೆಟ್ರೋಲ್, ಡೀಸೆಲ್ ದರ ಗರಿಷ್ಠ ಮಟ್ಟದಲ್ಲಿ ಇರುವುದು ಈ ಇಳಿಕೆಗೆ ಕಾರಣ ಎನ್ನಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ (ಪಿಪಿಎಸಿ) ನೀಡಿರುವ ಅಂಕಿ–ಅಂಶಗಳ ಪ್ರಕಾರ ಫೆಬ್ರುವರಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಶೇ 4.9ರಷ್ಟು ಇಳಿಕೆ ಕಂಡುಬಂದಿದೆ.

ಹಿಂದಿನ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದೇಶದಲ್ಲಿ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡವು. ನಂತರದಲ್ಲಿ ತೈಲೋತ್ಪನ್ನ ಮಾರಾಟ ಕಂಪನಿಗಳು ಬೆಲೆ ಹೆಚ್ಚಳಕ್ಕೆ ವಿರಾಮ ನೀಡಿವೆ. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ತೊಂದರೆ ಆಗದಿರಲಿ ಎಂಬ ಕಾರಣ ಬೆಲೆ ಹೆಚ್ಚಳಕ್ಕೆ ವಿರಾಮ ನೀಡಲಾಗಿದೆ ಎನ್ನಲಾಗಿದೆ.

ADVERTISEMENT

ದೇಶದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಇಂಧನವಾದ ಡೀಸೆಲ್‌ ಬೇಡಿಕೆಯು ಶೇ 8.5ರಷ್ಟು, ಪೆಟ್ರೋಲ್‌ ಬೇಡಿಕೆಯು ಶೇ 6.5ರಷ್ಟು ಇಳಿಕೆ ಆಗಿದೆ. ಆದರೆ, ಎಲ್‌ಪಿಜಿ ಸಿಲಿಂಡರ್‌ ಬೇಡಿಕೆಯಲ್ಲಿ ಶೇ 7.3ರಷ್ಟು ಏರಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.