ADVERTISEMENT

ಫೆಬ್ರುವರಿಯಲ್ಲಿ ರಿಟೇಲ್ ಹಣದುಬ್ಬರ ಶೇ 4.83ಕ್ಕೆ ಏರಿಕೆ?

ರಾಯಿಟರ್ಸ್
Published 10 ಮಾರ್ಚ್ 2021, 12:28 IST
Last Updated 10 ಮಾರ್ಚ್ 2021, 12:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಹಾರ ಮತ್ತು ಇಂಧನ ದರಗಳು ಏರಿಕೆ ಆಗಿರುವುದರಿಂದ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣವು ಫೆಬ್ರುವರಿಯಲ್ಲಿ ಏರಿಕೆ ಆಗಿರುವ ಸಾಧ್ಯತೆ ಇದೆ ಎಂದು ರಾಯಿಟರ್ಸ್‌ ಸಮೀಕ್ಷೆ ಹೇಳಿದೆ. ‘ಹೀಗಿದ್ದರೂ, ಹಣದುಬ್ಬರ ಪ್ರಮಾಣವು ಸತತ ಮೂರನೇ ತಿಂಗಳಿನಲ್ಲಿಯೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿರುವ ಮಿತಿಯೊಳಗೇ ಇದೆ’ ಎಂದು ಸಮೀಕ್ಷೆ ಹೇಳಿದೆ.

ರಾಯಿಟರ್ಸ್ ಸಂಸ್ಥೆಯು ಮಾರ್ಚ್ 5ರಿಂದ 9ರವರೆಗೆ 50 ಜನ ಅರ್ಥಶಾಸ್ತ್ರಜ್ಞರಿಂದ ಅಭಿಪ್ರಾಯ ಸಂಗ್ರಹಿಸಿದೆ. ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 4.06ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ ಶೇ 4.83ಕ್ಕೆ ಏರಿಕೆಯಾಗಿದೆ ಎಂಬ ಅಭಿಪ್ರಾಯವು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

‘ಫೆಬ್ರುವರಿಯಲ್ಲಿ ಹಣದುಬ್ಬರವು ಶೇ 4.8ಕ್ಕೆ ಪುಟಿದೆದ್ದಿದೆ ಎಂದು ನಾವು ಭಾವಿಸುತ್ತೇವೆ. ಕಳೆದ ತಿಂಗಳು ದೇಶಿ ಇಂಧನ ದರದಲ್ಲಿ ಆಗಿರುವ ಏರಿಕೆಯು ಸಾಗಣೆ ವೆಚ್ಚ ಹೆಚ್ಚಾಗಿದೆ ಎನ್ನುವುದನ್ನು ಸೂಚಿಸುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ, ಆಹಾರ ಉತ್ಪನ್ನಗಳ ರಿಟೇಲ್‌ ಬೆಲೆಯು ಆಹಾರ ಹಣದುಬ್ಬರದಲ್ಲಿ ಗಮನಾರ್ಹ ಏರಿಕೆಯನ್ನು ಸೂಚಿಸುತ್ತಿದೆ’ ಎಂದು ಕ್ಯಾಪಿಟಲ್‌ ಎಕನಾಮಿಕ್ಸ್‌ನಲ್ಲಿನ ಭಾರತದ ಆರ್ಥಶಾಸ್ತ್ರಜ್ಞ ಶೈಲನ್‌ ಶಾ ಹೇಳಿದ್ದಾರೆ.

ADVERTISEMENT

ಕೋವಿಡ್–19 ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬ್ರೆಂಟ್‌ ಕಚ್ಚಾತೈಲ ದರವು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಿದ್ದರೂ ಚಿಲ್ಲರೆ ಹಣದುಬ್ಬರವು ಆರ್‌ಬಿಐ ಹಾಕಿಕೊಂಡಿರುವ ಗರಿಷ್ಠ ಮಿತಿಯಾದ ಶೇ 6ರಷ್ಟನ್ನು ಮೀರಲಿದೆ ಎಂದು ಅರ್ಥಶಾಸ್ತ್ರಜ್ಞರಲ್ಲಿ ಯಾರೊಬ್ಬರೂ ಅಂದಾಜಿಸಿಲ್ಲ. ಚಿಲ್ಲರೆ ಹಣದುಬ್ಬರವು ಶೇ 3.80ರಿಂದ ಶೇ 5.40ರ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.

ಹಣದುಬ್ಬರ ದರ ಉಲ್ಬಣಗೊಳ್ಳುವ ಅಪಾಯಗಳ ಬಗ್ಗೆಆರ್‌ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯರು ಫೆಬ್ರವರಿ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಆದರೆ ಆರ್‌ಬಿಐ ರೆಪೊ ದರವನ್ನು ದಾಖಲೆಯ ಶೇ 4ರಷ್ಟರಲ್ಲೇ ಉಳಿಸಿಕೊಂಡಿದೆ. ಇದರಿಂದಾಗಿ ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಲಭ್ಯವಾಗಲಿದೆ ಎಂದು ಹೇಳಿದೆ.

ಹಣದುಬ್ಬರವು ಮಿತಿಯೊಳಗೇ ಇರುವುದರಿಂದ ಬಾಂಡ್‌ಗಳ ಮೇಲಿನ ಗಳಿಕೆಯನ್ನು ನಿಯಂತ್ರಿಸಲು ಮತ್ತು ಆರ್ಥಿಕ ಬೆಳವಣಿಗೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಆರ್‌ಬಿಐಗೆ ಅವಕಾಶ ಸಿಗಲಿದೆ. ತಯಾರಿಕಾ ವಲಯದ ಉತ್ಪಾದನೆ ಹೆಚ್ಚಳ ಮತ್ತು ಗರಿಷ್ಠ ಬೇಡಿಕೆ ಕಾರಣಗಳಿಂದಾಗಿ ಜನವರಿಯಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 0.9ಕ್ಕೆ ಏರಿಕೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.