
ನವದೆಹಲಿ: ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣವು ನವೆಂಬರ್‌ನಲ್ಲಿ ಶೇ 4ರಷ್ಟು ಹೆಚ್ಚಾಗಿದ್ದು ಐದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಕಚ್ಚಾ ತೈಲದಿಂದ ಉತ್ಪಾದಿಸಿದ ಇಂಧನದಲ್ಲಿ ಬಹುಪಾಲನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗಿದೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳ ಸಾಲಿನಲ್ಲಿ ಭಾರತವು ನವೆಂಬರ್‌ನಲ್ಲಿ ಎರಡನೆಯ ಸ್ಥಾನದಲ್ಲಿ ಇದೆ. ಚೀನಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧ ಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್‌ಇಎ) ಹೇಳಿದೆ.
ಭಾರತವು ಅಕ್ಟೋಬರ್‌ನಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು 2.5 ಬಿಲಿಯನ್ ಯೂರೊ (ಅಂದಾಜು ₹26 ಸಾವಿರ ಕೋಟಿ) ವೆಚ್ಚ ಮಾಡಿತ್ತು. ನವೆಂಬರ್‌ನಲ್ಲಿ 2.5 ಬಿಲಿಯನ್ ಯೂರೊ (ಅಂದಾಜು ₹27 ಸಾವಿರ ಕೋಟಿ) ವ್ಯಯಿಸಿದೆ.
ನವೆಂಬರ್‌ನಲ್ಲಿ ರಷ್ಯಾ ರಫ್ತು ಮಾಡಿದ ಒಟ್ಟು ಕಚ್ಚಾ ತೈಲದಲ್ಲಿ ಶೇ 47ರಷ್ಟನ್ನು ಚೀನಾ ಖರೀದಿಸಿದೆ, ಶೇ 38ರಷ್ಟನ್ನು ಭಾರತ ಖರೀದಿ ಮಾಡಿದೆ. ಟರ್ಕಿ (ಶೇ 6ರಷ್ಟು) ಮತ್ತು ಐರೋಪ್ಯ ಒಕ್ಕೂಟ (ಶೇ 6ರಷ್ಟು) ನಂತರದ ಸ್ಥಾನಗಳಲ್ಲಿವೆ.
‘ಅಕ್ಟೋಬರ್ ಆಮದಿಗೆ ಹೋಲಿಸಿದರೆ ನವೆಂಬರ್‌ನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿರುವ ಕಚ್ಚಾ ತೈಲದ ಪ್ರಮಾಣವು ಶೇ 4ರಷ್ಟು ಹೆಚ್ಚು’ ಎಂದು ಸಿಆರ್‌ಇಎ ಹೇಳಿದೆ.
‘ವಾಸ್ತವದಲ್ಲಿ, ಡಿಸೆಂಬರ್‌ನಲ್ಲಿ ಭಾರತದ ಆಮದು ಪ್ರಮಾಣವು ಇನ್ನಷ್ಟು ಹೆಚ್ಚಾಗಬಹುದು. ಏಕೆಂದರೆ ಅಮೆರಿಕವು ರಷ್ಯಾದ ಮೇಲೆ ವಿಧಿಸಿದ ನಿರ್ಬಂಧಗಳು ಜಾರಿಗೆ ಬರುವುದಕ್ಕಿಂತ ಮೊದಲು ಹಡಗುಗಳಿಗೆ ಹೇರಲಾದ ಸರಕುಗಳು ಡಿಸೆಂಬರ್‌ನಲ್ಲಿ ಭಾರತಕ್ಕೆ ಬರುತ್ತವೆ’ ಎಂದು ಅದು ಹೇಳಿದೆ.
ಅಮೆರಿಕವು ರಷ್ಯಾದ ಲುಕಾಯಿಲ್ ಮತ್ತು ರೋಸ್ನೆಫ್ಟ್ ಕಂಪನಿಗಳ ಮೇಲೆ ಅಕ್ಟೋಬರ್ 22ರಂದು ನಿರ್ಬಂಧಗಳನ್ನು ವಿಧಿಸಿದೆ. ಇದರ ಪರಿಣಾಮವಾಗಿ ರಿಲಯನ್ಸ್ ಇಂಡಸ್ಟ್ರೀಸ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಎಚ್‌ಪಿಸಿಎಲ್–ಮಿತ್ತಲ್ ಎನರ್ಜಿ, ಎಂಆರ್‌ಪಿಎಲ್ ಕಂಪನಿಗಳು ರಷ್ಯಾದಿಂದ ಆಮದನ್ನು ಸದ್ಯಕ್ಕೆ ನಿಲ್ಲಿಸಿವೆ. ಆದರೆ ಇಂಡಿಯನ್ ಆಯಿಲ್ ಕಂಪನಿಯು ನಿರ್ಬಂಧಕ್ಕೆ ಗುರಿಯಾಗದ ರಷ್ಯಾ ಕಂಪನಿಗಳಿಂದ ಆಮದು ಮುಂದುವರಿಸಿದೆ.
‘ಖಾಸಗಿ ಕಂಪನಿಗಳಿಂದ ಆಗುವ ಆಮದು ಪ್ರಮಾಣ ತುಸು ತಗ್ಗಿದೆ. ಸರ್ಕಾರಿ ಕಂಪನಿಗಳಿಂದ ಆಗುವ ಆಮದು ಪ್ರಮಾಣ ಶೇ 22ರಷ್ಟು ಹೆಚ್ಚಾಗಿದೆ’ ಎಂದು ಸಿಆರ್‌ಇಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.