ADVERTISEMENT

ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

ಪಿಟಿಐ
Published 5 ಜನವರಿ 2022, 11:35 IST
Last Updated 5 ಜನವರಿ 2022, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಡಿಸೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸಂಸ್ಥೆ ಬುಧವಾರ ಹೇಳಿದೆ. ಬೆಲೆ ಏರಿಕೆಯ ಒತ್ತಡ ಮತ್ತು ಓಮೈಕ್ರಾನ್‌ ಪ್ರಭಾವದಿಂದಾಗಿ ವಹಿವಾಟಿನ ಮೇಲೆ ಪರಿಣಾಮ ಉಂಟಾಗಿದೆ ಎಂದು ಅದು ತಿಳಿಸಿದೆ.

ಸೇವಾ ವಲಯದ ಚಟುವಟಿಕೆ ತಿಳಿಸುವ ಸೂಚ್ಯಂಕವು ನವೆಂಬರ್‌ನಲ್ಲಿ 58.1ರಷ್ಟು ಇತ್ತು. ಡಿಸೆಂಬರ್‌ನಲ್ಲಿ ಇದು 55.5ಕ್ಕೆ ಇಳಿಕೆ ಆಗಿದೆ. ಇದು ಮೂರು ತಿಂಗಳ ಕನಿಷ್ಠ ಮಟ್ಟ. ಬೆಳವಣಿಗೆಯ ದೃಷ್ಟಿಯಿಂದ ಸತತ ಐದನೇ ತಿಂಗಳಿನಲ್ಲಿಯೂ ಸೇವಾ ವಲಯದ ಚಟುವಟಿಕೆಗಳು ಸಕಾರಾತ್ಮಕ ಮಟ್ಟದಲ್ಲಿಯೇ ಇವೆ.

ಸೇವೆಗಳ ಪೂರೈಕೆದಾರರಿಗೆ 2021 ಸಹ ಏರಿಳಿತದ ವರ್ಷವಾಗಿದೆ. ಡಿಸೆಂಬರ್‌ ತಿಂಗಳ ಬೆಳವಣಿಗೆಯು ತುಸು ಇಳಿಕೆ ಕಂಡಿದೆ. ಹೀಗಿದ್ದರೂ ಸಮೀಕ್ಷೆಯ ಪ್ರಕಾರ ಮಾರಾಟ ಮತ್ತು ವಹಿವಾಟು ಚಟುವಟಿಕೆ ದೃಢ ಹೆಚ್ಚಳವನ್ನು ಕಾಣುತ್ತಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.

ADVERTISEMENT

ಸೇವಾ ವಲಯದಲ್ಲಿ ಮತ್ತೆ ಉದ್ಯೋಗ ಕಡಿತ ಆರಂಭ ಆಗಿದ್ದರೂ ಉದ್ಯೋಗ ಕಡಿತದ ಪ್ರಮಾಣವು ಅಲ್ಪ ಮಟ್ಟದ್ದಾಗಿದೆ. ಸದ್ಯದ ಕೆಲಸದ ಹೊರೆಯನ್ನು ನಿರ್ವಹಿಸಲು ಈಗಿರುವ ಉದ್ಯೋಗಿಗಳ ಸಂಖ್ಯೆಯು ಸಾಕಾಗುತ್ತದೆ ಎಂದು ಕಂಪನಿಗಳು ಹೇಳಿವೆ. ವಹಿವಾಟು ನಡೆಸುವ ವಿಶ್ವಾಸವು ಡಿಸೆಂಬರ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಹೀಗಿದ್ದರೂ ಹಿಂದಿನ ಅಂಕಿ–ಅಂಶಗಳನ್ನು ಗಮನಿಸಿದರೆ ಮಂದಗತಿಯಲ್ಲಿಯೇ ಇದೆ.

ಬೇಡಿಕೆಯಲ್ಲಿ ಸುಧಾರಣೆ ಕಂಡುಬರಲಿದೆ ಎನ್ನುವುದು ಕೆಲವು ಕಂಪನಿಗಳ ಅಭಿಪ್ರಾಯ. ಬೆಲೆ ಏರಿಕೆಯ ಒತ್ತಡ ಮತ್ತು ಕೋವಿಡ್‌ನ ಹೊಸ ಅಲೆಯ ಕಾರಣದಿಂದಾಗಿ ಚೇತರಿಕೆಯ ಮೇಲೆ ಪರಿಣಾಮ ಉಂಟಾಗಬಹುದು ಎಂದು ಕೆಲವು ಕಂಪನಿಗಳು ಹೇಳುತ್ತಿವೆ.

ತಯಾರಿಕೆ ಮತ್ತು ಸೇವಾ ವಲಯದ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ನವೆಂಬರ್‌ನಲ್ಲಿ 59.2ರಷ್ಟು ಇತ್ತು. ಅದು ಡಿಸೆಂಬರ್‌ನಲ್ಲಿ 56.4ಕ್ಕೆ ಇಳಿಕೆ ಆಗಿದೆ. ಹೀಗಿದ್ದರೂ ದೀರ್ಘಾವಧಿಯ ಸರಾಸರಿ 53.9ಕ್ಕಿಂತಲೂ ಮೇಲ್ಮಟ್ಟದಲ್ಲಿಯೇ ಇದೆ. ಎರಡು ವಲಯಗಳಲ್ಲಿ ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬರಿಗೆ ಉದ್ಯೋಗ ಕಡಿತ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.