ಬೆಂಗಳೂರು: ದೇಶದ ಸೇವಾ ವಲಯದ ಡಿಸೆಂಬರ್ ತಿಂಗಳ ಬೆಳವಣಿಗೆ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ವರದಿ ಸೋಮವಾರ ತಿಳಿಸಿದೆ.
ನವೆಂಬರ್ ತಿಂಗಳಲ್ಲಿ ಸೂಚ್ಯಂಕವು 58.4 ದಾಖಲಾಗಿತ್ತು. ಇದು ಡಿಸೆಂಬರ್‌ನಲ್ಲಿ 59.3ಕ್ಕೆ ಏರಿಕೆ ಆಗಿದೆ. ನಿರಂತರ ಬೇಡಿಕೆಯಿಂದ ನೇಮಕಾತಿ ಪ್ರಮಾಣ ಹೆಚ್ಚಳವಾಯಿತು. ಹಣದುಬ್ಬರದ ಒತ್ತಡ ಇಳಿಕೆಯಾಗಿದೆ. ಇದರಿಂದ ಸೂಚ್ಯಂಕವು ಏರಿಕೆಯಾಗಿದೆ ಎಂದು ತಿಳಿಸಿದೆ. ಆಗಸ್ಟ್‌ನಲ್ಲಿ ಸೂಚ್ಯಂಕವು 60.9 ದಾಖಲಾಗಿತ್ತು.
ವಲಯದ ಚಟುವಟಿಕೆಯು ಮೂರು ವರ್ಷಗಳಿಗೂ ಹೆಚ್ಚು ಕಾಲ ವಿಸ್ತರಣೆಯ ಹಾದಿಯಲ್ಲಿದೆ. ಸೂಚ್ಯಂಕವು 50ಕ್ಕಿಂತ ಮೇಲಿದ್ದರೆ ಬೆಳವಣಿಗೆಯು ಸಶಕ್ತವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದರ್ಥ.
‘ಹೆಚ್ಚಿದ ಬೇಡಿಕೆ ಮತ್ತು ವಿಸ್ತರಿಸಿದ ಚಟುವಟಿಕೆಗಳು ವಹಿವಾಟಿನ ವಿಶ್ವಾಸವನ್ನು ಹೆಚ್ಚಿಸಿವೆ. ವ್ಯಾಪಾರದ ಆಶಾವಾದವು ಸದೃಢವಾಗಿ ಉಳಿದಿದೆ’ ಎಂದು ಎಚ್‌ಎಸ್‌ಬಿಸಿಯ ಅರ್ಥಶಾಸ್ತ್ರಜ್ಞ ಇನೆಸ್ ಲ್ಯಾಮ್ ಹೇಳಿದ್ದಾರೆ.
ಹೆಚ್ಚುತ್ತಿರುವ ವ್ಯಾಪಾರವು, ನೇಮಕಾತಿ ಹೆಚ್ಚಳಕ್ಕೆ ಕಾರಣವಾಯಿತು. ಆಹಾರ, ವೇತನ ಮತ್ತು ಕಚ್ಚಾವಸ್ತುಗಳಿಗೆ ಹೆಚ್ಚು ಪಾವತಿಸಿದ ಕಾರಣ ಬೆಲೆ ಹೆಚ್ಚಳವಾಯಿತು. ಸೇವಾ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಕೆಲವು ಹೆಚ್ಚುವರಿ ವೆಚ್ಚಗಳನ್ನು ವರ್ಗಾಯಿಸಿದರು ಎಂದು ವರದಿ ತಿಳಿಸಿದೆ.
ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ.
2023
ಡಿಸೆಂಬರ್; 59
2024
ಜನವರಿ;61.8
ಫೆಬ್ರುವರಿ;60.6
ಮಾರ್ಚ್;61.2
ಏಪ್ರಿಲ್;60.8
ಮೇ;60.2
ಜೂನ್;60.5
ಜುಲೈ;60.3
ಆಗಸ್ಟ್;60.9
ಸೆಪ್ಟೆಂಬರ್;57.7
ಅಕ್ಟೋಬರ್;58.5
ನವೆಂಬರ್;58.4
ಡಿಸೆಂಬರ್; 59.3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.