ಸಾಂದರ್ಭಿಕ ಚಿತ್ರ
ಅಹಮದಾಬಾದ್: ಕೇಂದ್ರ ಸರ್ಕಾರವು ಎಥಿಲೀನ್ ಆಕ್ಸೈಡ್ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕಿದೆ. ಇಲ್ಲವಾದರೆ 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಸಂಬಾರ ಪದಾರ್ಥಗಳ ರಫ್ತಿನಲ್ಲಿ ಶೇ 40ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಸಂಬಾರ ಪದಾರ್ಥಗಳ ಪಾಲುದಾರರ ಒಕ್ಕೂಟ (ಎಫ್‌ಐಎಸ್‌ಎಸ್) ಆತಂಕ ವ್ಯಕ್ತಪಡಿಸಿದೆ.
‘ರಫ್ತುದಾರರ ಕೈಯಲ್ಲಿ ಸಾಕಷ್ಟು ಹೊಸ ಆರ್ಡರ್‌ಗಳಿವೆ. ಆದರೆ, ಎಂಡಿಎಚ್ ಹಾಗೂ ಎವರೆಸ್ಟ್ ಕಂಪನಿಯ ಪದಾರ್ಥಗಳಲ್ಲಿ ಪತ್ತೆಯಾದ ಕೀಟನಾಶಕ ಅಂಶದಿಂದಾಗಿ ಉತ್ಪನ್ನಗಳ ರವಾನೆಯನ್ನು ಸ್ಥಗಿತಗೊಳಿಸಿದ್ದಾರೆ’ ಎಂದು ಒಕ್ಕೂಟದ ಕಾರ್ಯದರ್ಶಿ ತೇಜಸ್ ಗಾಂಧಿ ತಿಳಿಸಿದ್ದಾರೆ.
‘ಸಂಬಾರ ಪದಾರ್ಥಗಳಲ್ಲಿರುವ ಎಥಿಲೀನ್ ಆಕ್ಸೈಡ್ ಅಂಶಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕೀಟನಾಶಕ ಅವಶೇಷದ ಪ್ರಮಾಣವನ್ನು ತಗ್ಗಿಸಿ ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಸಾರವಾಗಿಯೇ ಕಳೆದ ನಾಲ್ಕು ದಶಕಗಳಿಂದ ಅಮೆರಿಕಕ್ಕೆ ರವಾನಿಸಲಾಗುತ್ತಿದೆ’ ಎಂದು ಒಕ್ಕೂಟದ ಅಶ್ವಿನ್ ನಾಯಕ್ ತಿಳಿಸಿದ್ದಾರೆ.
2023–24ರಲ್ಲಿ ಭಾರತವು ₹35 ಸಾವಿರ ಕೋಟಿ ಮೌಲ್ಯದ ಸಂಬಾರ ಪದಾರ್ಥಗಳನ್ನು ರಫ್ತು ಮಾಡಿದೆ. ಇದು ಜಾಗತಿಕ ಮಟ್ಟದಲ್ಲಿ ಸಂಬಾರ ಪದಾರ್ಥಗಳ ಒಟ್ಟು ರಫ್ತಿನಲ್ಲಿ ಶೇ 12ರಷ್ಟು ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.