ADVERTISEMENT

ಇಂದ್ರಾ ನೂಯಿ ಪೆಪ್ಸಿಕೊ ಹೆಜ್ಜೆ ಗುರುತು

ಜಕ್ಕಣಕ್ಕಿ ಎಂ ದಯಾನಂದ
Published 5 ಸೆಪ್ಟೆಂಬರ್ 2018, 1:56 IST
Last Updated 5 ಸೆಪ್ಟೆಂಬರ್ 2018, 1:56 IST
ಇಂದ್ರಾ ನೂಯಿ
ಇಂದ್ರಾ ನೂಯಿ   

‘ಪೆ ಪ್ಸಿಕೊ ಸಾಕಷ್ಟು ಅಭಿವೃದ್ಧಿಯಾಗಲು ಈಗಾಗಲೇ ಒಂದು ಬಲಿಷ್ಠವಾದ ಸ್ಥಾನದಲ್ಲಿ ಇಂದು ನಿಂತಿದೆ. ಇದಕ್ಕೊಂದು ಸುಂದರ ಭವಿಷ್ಯವಿದೆ. ನಾನು ಈವರೆಗೆ ಕೆಲಸ ಮಾಡಿದ ಕಂಪನಿ ಮುಂದೆಯೂ ದೊಡ್ಡದಾಗಿ ಬೆಳೆಯಬೇಕು, ಅದಕ್ಕೊಂದು ಬುನಾದಿ ನಾನು ಹಾಕಿದ್ದೇನೆ ಎಂಬ ಆತ್ಮವಿಶ್ವಾಸ ನನ್ನದು'

ಇವು, ಸಿಇಒ ಹುದ್ದೆಯಿಂದ ನಿರ್ಗಮಿಸುವ ವೇಳೆ ಭಾರತ ಸಂಜಾತೆ ಇಂದ್ರಾ ನೂಯಿ ಅವರು ಹೇಳಿದ ಮಾತುಗಳು.

ಹೌದು. ಇಂದ್ರಾ ಅವರು ಆಗಸ್ಟ್‌ 6 ರಂದು ಈ ತೀರ್ಮಾನ ಪ್ರಕಟಿಸಿದಾಗ ಜಾಗತಿಕ ಮಟ್ಟದ ಕಂಪನಿಗಳು ಅಚ್ಚರಿ ವ್ಯಕ್ತಪಡಿಸಿದವು. 24 ವರ್ಷ ಪೆಪ್ಸಿಕೊದ ಭಾಗವಾಗಿದ್ದ ಅವರ ಒಡನಾಟ ಇದೇ ಅಕ್ಟೋಬರ್‌ 3ಕ್ಕೆ ಕೊನೆಗೊಳ್ಳಲಿದೆ. 2019ರ ಕೆಲ ತಿಂಗಳವರೆಗೆ ಸಂಸ್ಥೆಯ ಅಧ್ಯಕ್ಷೆ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಪೆಪ್ಸಿಕೊದ 41 ವರ್ಷದ ಇತಿಹಾಸದಲ್ಲಿ ಇಂದ್ರಾ ಅವರು 5 ನೇ ಸಿಇಒ ಆಗಿ ನೇಮಕಗೊಂಡಿದ್ದರು. ಅದೂ ಮಹಿಳಾ ಸಿಇಒ ಇವರೇ ಮೊದಲು.

ADVERTISEMENT

ಜಾಗತಿಕ ಮಟ್ಟದ ದೊಡ್ಡ ಕಂಪನಿಯನ್ನು ಇಷ್ಟು ವರ್ಷ ನಿರ್ವಹಿಸಿದ ಇಂದ್ರಾ, ವಿಶ್ವದ ಅತ್ಯಂತ ಪ್ರಭಾವಿ ಉದ್ಯಮ ಮುಖ್ಯಸ್ಥೆರಲ್ಲಿಯೂ ಒಬ್ಬರಾಗಿದ್ದರು.
ಪೆಪ್ಸಿಕೊ ಉದ್ಯಮ ಇಷ್ಟೊಂದು ಮಟ್ಟದಲ್ಲಿ ಬೆಳೆಯಲು ಅವರ ಮುಂದಾಲೋಚನೆ, ವಿಸ್ತರಣೆ ತಂತ್ರಗಳು, ಲಾಭದತ್ತ ಕೊಂಡೊಯ್ಯಲು ಹಾಕಿದ ಶ್ರಮ ಎಲ್ಲವೂ ಗಮನಾರ್ಹ. ಸ್ಪರ್ಧೆ ನೀಡುವ ಕಂಪನಿಗಳ ಎದುರು ಸೈ ಎನಿಸಿಕೊಳ್ಳುವಂತೆ ಕೆಲಸ ಮಾಡಿದ ಇಂದ್ರಾ ಅವರ ಜಾಣ್ಮೆ ಹಲವರಿಗೆ ಸ್ಫೂರ್ತಿದಾಯಕವೂ ಆಗಿತ್ತು. ಯಾವುದೇ ಸವಾಲು ಎದುರಾಗದಂತೆ ಕಂಪನಿ ನಡೆಸಿದ ಹಿರಿಮೆ ಇವರದು. ಪೋಬ್ಸ್‌ ಮತ್ತು ಫಾರ್ಚೂನ್‌ ನಿಯತಕಾಲಿಕಗಳ ಪಟ್ಟಿಯಲ್ಲಿ ನೂಯಿ ಹೆಸರು ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು. ಇದು ಅವರ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.

ಉದ್ಯಮ ವಿಸ್ತರಣೆ

ಇಂದ್ರಾ ಅವರು ಸಿಇಒ ಆಗಿದ್ದಾಗ ಪೆಪ್ಸಿಕೊದ ವ್ಯವಹಾರ ಗಣನೀಯ ಪ್ರಮಾಣದಲ್ಲಿ ವಿಸ್ತರಣೆಯಾಗಿದೆ. ಹಿಂದಿನ ವರ್ಷದ ವಹಿವಾಟು ₹ 4.44 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ ಇದು 2006 ರಲ್ಲಿ ₹ 2.45 ಲಕ್ಷ ಕೋಟಿ ಇತ್ತು. ಇದಲ್ಲದೆ ಕಂಪನಿಯ ಷೇರುಬೆಲೆ ₹ 8,141ಕ್ಕೆ ತಲುಪಿದೆ. 2006 ರಿಂದ ಆರೋಗ್ಯಯುತ ಆಹಾರ ಉತ್ಪನ್ನ ಮತ್ತು ಪಾನೀಯಗಳಿಂದ ಬರುವ ಆದಾಯ ಶೇ 30 ರಿಂದ 50ಕ್ಕೆ ಏರಿಕೆಯಾಗಿದೆ. ಬೇಕ್ಡ್‌ ಚಿಪ್ಸ್‌, ಬಾಟಲ್‌ ನೀರಿನ ಬ್ರ್ಯಾಂಡ್‌ಗಳಾದ ಲೈಫ್‌ವಾಟರ್, ಬಬ್ಲಿ ಮುಂತಾದ ಹೊಸ ಉತ್ಪನ್ನಗಳ ತಯಾರಿಕೆಗೆ ಚಾಲನೆ ನೀಡಿದರು. 2006 ರಿಂದ ಆಹಾರ ಉತ್ಪನ್ನ ಮತ್ತು ಪಾನೀಯಗಳಿಂದ ಬರುವ ಆದಾಯದಲ್ಲಿ ಶೇ 38 ರಿಂದ ಶೇ 50ಕ್ಕೇ ಏರಿಕೆಯಾಗಿದೆ.

ಬೇರ್‌ ಫುಡ್ಸ್‌ ಖರೀದಿ

ಇಂದ್ರಾ ಅವರು ಸಿಇಒ ಆಗಿದ್ದಾಗ ಪಾನೀಯ ಮತ್ತು ಆಹಾರ ಉತ್ಪನ್ನ ಕಂಪನಿ ‘ಬೇರ್‌ ಫುಡ್ಸ್ ’ ಅನ್ನು ಖರೀದಿ ಮಾಡಲಾಗಿತ್ತು. ಇದರಿಂದ ಪೆಪ್ಸಿಕೊದ ಮಾರುಕಟ್ಟೆ ಮತ್ತಷ್ಟು ವಿಸ್ತರಣೆಯಾಯಿತು. ಈ ಖರೀದಿಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಎಲ್ಲೂ ಬಹಿರಂಗ ಮಾಡಲಿಲ್ಲ. ಬೇರ್‌ ಫುಡ್ಸ್‌ ಮಾರುಕಟ್ಟೆಗಳಲ್ಲದೆ ಆನ್‌ಲೈನ್‌ನಲ್ಲೂ ಮಾರಾಟ ಮಾಡುತಿತ್ತು. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಅಂದಾಜಿಸಿದ ಪ್ರಕಾರ, ಬೇರ್‌ ಫುಡ್ಸ್ ಖರೀದಿಯೊಂದಿಗೆ ಪೆಪ್ಸಿಕೊದ ಮಾರುಕಟ್ಟೆ ಶೇ 20 ರಷ್ಟು ವಿಸ್ತಾರವಾಯಿತು.

2008 ರಲ್ಲಿ ಸಬ್ರಾ ಕಂಪನಿಯಲ್ಲಿ ಶೇ 50 ರಷ್ಟು ಪಾಲು ಬಂಡವಾಳ ಖರೀದಿ, 2011 ರಲ್ಲಿ ಬ್ರೆಜಿಲ್‌ನ ಸ್ನ್ಯಾಕ್‌ ಕಂಪನಿ ಮಾಬೆಲ್‌ ಸ್ವಾಧೀನ ಇಂದ್ರಾ ಅವರ ಮಹತ್ವದ ನಿರ್ಧಾರಗಳಾಗಿದ್ದವು.

ಸ್ಟೀವ್ ಜಾಬ್ಸ್ ಸಲಹೆ

ಇಂದ್ರಾ ಅವರು ಪೆಪ್ಸಿಕೊ ಸಿಇಒ ಆಗಿ 2006ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಆ್ಯಪಲ್ ಸ್ಥಾಪಕ ಸ್ಟೀವ್ ಜಾಬ್ಸ್‌ ಅವರನ್ನು ಭೇಟಿ ಮಾಡಿದ್ದರು. ಆ್ಯಪಲ್ ಆಗ ಹೆಸರು ಮಾಡಿತ್ತು. ಇದರ ಹಿಂದಿನ ಪ್ರೇರಕಶಕ್ತಿಯಾಗಿ ಸ್ಟೀವ್‌ ಕೆಲಸ ಮಾಡಿದ್ದರು. ಇದು ಹೇಗೆ ಸಾಧ್ಯ ಎಂದು ನೂಯಿ ತಿಳಿದುಕೊಳ್ಳಲು ಬಯಸಿದ್ದರು. ಸ್ಟ್ಯಾನ್‌ಫೋರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿ 2016ರಲ್ಲಿ ನಡೆದ ಸಮಾರಂಭದಲ್ಲಿ ಸ್ಟೀವ್‌ ಅವರೊಂದಿಗೆ ಮೂರುಗಂಟೆ ನಡೆಸಿದ ಮಾತುಕತೆಯನ್ನು ನೆನಪಿಸಿಕೊಂಡಿದ್ದರು.

‘ಗುರಿಗಳಿಗೆ ಬದ್ಧರಾಗಿರಿ’ ಎಂಬ ಸ್ಟೀವ್ ಅವರ ಮಾತು ಇಂದ್ರಾ ಅವರನ್ನು ಹೆಚ್ಚು ಪ್ರಭಾವಿಸಿತ್ತು. ನಿಗದಿತ ಗುರಿ ತಲುಪಲು ಎಷ್ಟೇ ಕಷ್ಟವಾದರೂ ಸಹಿಸಿಕೊಳ್ಳಬೇಕು ಎಂದು ಜಾಬ್ಸ್ ಸಲಹೆ ನೀಡಿದ್ದರು.

ಯಾವುದೇ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಲು ವಿನ್ಯಾಸಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಅದು ಅಂಗಡಿಗಳ ಶೆಲ್ಫ್‌ಗಳಲ್ಲಿ ಇಟ್ಟರೆ ಹೇಗೆ ಕಾಣಬೇಕು ಎಂಬ ಸಣ್ಣ ಸಣ್ಣ ವಿಚಾರಗಳನ್ನೂ ಸ್ಟೀವ್ ಅವರಿಂದ ಇಂದ್ರಾ ತಿಳಿದುಕೊಂಡಿದ್ದರು. ಸಿಇಒ ಆಗಿದ್ದರೂ ಚಿಕ್ಕಪುಟ್ಟ ಅಂಗಡಿಗಳಿಗೆ ಪ್ರತಿ ವಾರ ಹೋಗಿ, ಅಲ್ಲಿ ಮಾರಾಟಕ್ಕಿಟ್ಟಿದ್ದ ಪೆಪ್ಸಿಕೊ ಉತ್ನನ್ನಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಬರುತ್ತಿದ್ದರು. ಒಬ್ಬ ಗ್ರಾಹಕನಾಗಿ ಹೇಗೆ ದೃಷ್ಟಿಕೋನವಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಇದೆಲ್ಲದರ ಉದ್ದೇಶವಾಗಿತ್ತು.

ಉಳಿದವರು 24 ಮಂದಿ ಮಹಿಳೆಯರು

ನೂಯಿ ಅವರು ಪೆಪ್ಸಿಕೊದಿಂದ ಹೊರನಡೆಯುವ ತೀರ್ಮಾನ ಪ್ರಕಟವಾದ ನಂತರ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಮುಖ್ಯಸ್ಥರಾಗಿ ಉಳಿದವರು ಕೇವಲ 24 ಮಂದಿ ಮಹಿಳೆಯರು ಮಾತ್ರ. ಕ್ಯಾಂಪ್‌ಬೆಲ್‌ ಸೂಪ್‌ ಕಂಪನಿಯ ಡೆನಿಸ್‌ ಎಂ.ಮಾರಿಸನ್‌ ಮತ್ತು ಮಂಡೆಲೆಜ್‌ ಇಂಟರ್‌ನ್ಯಾಷನಲ್‌ನ ಇರೇನೆ ರೋಸೆನ್‌ಫೆಲ್ಡ್‌ ಸಹ ಇತ್ತೀಚಿಗೆ ಪದತ್ಯಾಗ ಮಾಡಿದ್ದಾರೆ.

ಸಿಇಒ ಹುದ್ದೆಯಿಂದ ಮಹಿಳೆ ಇಳಿದಾಗ ಮತ್ತೆ ಮಹಿಳೆಯೇ ಆ ಸ್ಥಾನವನ್ನು ತುಂಬಿರುವುದು ದೊಡ್ಡ ಕಂಪನಿಗಳ ಇತಿಹಾಸದಲ್ಲೇ ಕೇವಲ ಮೂರು ಬಾರಿ ಮಾತ್ರ. 2009 ರಲ್ಲಿ ಜೆರಾಕ್ಸ್‌ ಕಂಪನಿಯ ಉರುಸುಲಾ ಬರ್ನ್ಸ್‌ ಅವರಿಂದ ಅನ್ನೇ ಮ್ಯಾಲ್ಕೆ, 2011 ರಲ್ಲಿ ಅವಾನ್‌ ಕಂಪನಿಯ ಶೇರಿ ಮ್ಯಾಕಾಯಿ ಅವರಿಂದ ಆ್ಯಂಡ್ರ್ಯೂ ಜಂಗ್‌ ಅವರು ಮತ್ತು ರೆನಾನ್ಡ್ಸ್‌ ಅಮೆರಿಕದ ಸುಸಾನ್‌ ಕ್ಯಾಮರಾನ್‌ ಅವರಿಂದ ದೆಬ್ರಾ ಎ ಕ್ರ್ಯೂ ಅವರು ಕಳೆದ ವರ್ಷ ಅಧಿಕಾರ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.