ADVERTISEMENT

Industrial Production: ಕೈಗಾರಿಕಾ ಉತ್ಪಾದನೆ ಎರಡು ವರ್ಷಗಳ ಗರಿಷ್ಠ

ಪಿಟಿಐ
Published 29 ಡಿಸೆಂಬರ್ 2025, 15:32 IST
Last Updated 29 ಡಿಸೆಂಬರ್ 2025, 15:32 IST
   

ನವದೆಹಲಿ: ದೇಶದ ಕೈಗಾರಿಕಾ ವಲಯದ ಬೆಳವಣಿಗೆ ಪ್ರಮಾಣವು ನವೆಂಬರ್‌ ತಿಂಗಳಲ್ಲಿ ಶೇಕಡ 6.7ರಷ್ಟಾಗಿದೆ. ಇದು ಎರಡು ವರ್ಷಗಳ ಗರಿಷ್ಠ ಮಟ್ಟ. ತಯಾರಿಕೆ, ಗಣಿಗಾರಿಕೆ ವಲಯಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂದಿದ್ದು ಈ ಪ್ರಮಾಣದ ಬೆಳವಣಿಗೆಗೆ ನೆರವಾಗಿದೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಆಧಾರಲ್ಲಿ ಹೇಳುವ ಕೈಗಾರಿಕಾ ಉತ್ಪಾದನೆ ಪ್ರಮಾಣವು ಹಿಂದಿನ ವರ್ಷದ ನವೆಂಬರ್‌ನಲ್ಲಿ ಶೇ 5ರಷ್ಟು ಬೆಳವಣಿಗೆ ಸಾಧಿಸಿತ್ತು. 2023ರ ನವೆಂಬರ್‌ನಲ್ಲಿ ಕೈಗಾರಿಕಾ ಬೆಳವಣಿಗೆ ಪ್ರಮಾಣವು ಶೇ 11.9ರಷ್ಟಾಗಿತ್ತು. ಅದಾದ ನಂತರದ ಅತಿಹೆಚ್ಚಿನ ಬೆಳವಣಿಗೆ ಪ್ರಮಾಣವು ಈ ಬಾರಿಯ ನವೆಂಬರ್‌ನಲ್ಲಿ ದಾಖಲಾಗಿದೆ.

ಈ ವರ್ಷ ಹಬ್ಬಗಳ ಋತು ಆರಂಭಕ್ಕೂ ಮೊದಲು ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ದರಗಳನ್ನು ಇಳಿಕೆ ಮಾಡಲಾಯಿತು. ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಮಾಡುವ ಉದ್ದೇಶದ ಈ ಇಳಿಕೆಗಳು ಸೆಪ್ಟೆಂಬರ್‌ 22ರಿಂದ ಜಾರಿಗೆ ಬಂದಿವೆ.

ADVERTISEMENT

ಜಿಎಸ್‌ಟಿ ದರ ಇಳಿಕೆಯ ಪ್ರಯೋಜನವನ್ನು ಪಡೆಯಲು ವಿವಿಧ ಕಂಪನಿಗಳು ಮುಂದಾದವು. ಹೀಗಾಗಿ, ತಯಾರಿಕಾ ವಲಯಕ್ಕೆ ಹೆಚ್ಚಿನ ಕಾರ್ಯಾದೇಶಗಳು ಲಭ್ಯವಾದವು.

ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಅವರು, ‘ಡಿಸೆಂಬರ್‌ನಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಳ ಕಂಡಿದೆ. ಇದರಿಂದಾಗಿ ಈ ತಿಂಗಳಲ್ಲಿ ವಿದ್ಯುತ್ ಉತ್ಪಾದನೆಯೂ ಹೆಚ್ಚಳ ಕಾಣಲಿದೆ. ಇದು ಡಿಸೆಂಬರ್‌ನಲ್ಲಿಯೂ ಕೈಗಾರಿಕಾ ಬೆಳವಣಿಗೆಗೆ ಪೂರಕ’ ಎಂದು ಹೇಳಿದ್ದಾರೆ.

ಅಕ್ಟೋಬರ್‌ನ ಕೈಗಾರಿಕಾ ಬೆಳವಣಿಗೆ ಪ್ರಮಾಣವನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಪರಿಷ್ಕರಿಸಿದ್ದು, ಅದು ಶೇ 0.5 ಎಂದು ಹೇಳಿದೆ. ಕಳೆದ ತಿಂಗಳು ಈ ದತ್ತಾಂಶ ಬಿಡುಗಡೆ ಮಾಡುವಾಗ ಎನ್‌ಎಸ್‌ಒ, ಬೆಳವಣಿಗೆ ಪ್ರಮಾಣ ಶೇ 0.4ರಷ್ಟಿದೆ ಎಂದು ತಿಳಿಸಿತ್ತು.

‘ತಯಾರಿಕಾ ವಲಯದಲ್ಲಿ ಕಂಡುಬಂದ ಶೇ 8ರಷ್ಟು ಬೆಳವಣಿಗೆಯ ಪರಿಣಾಮವಾಗಿ ಕೈಗಾರಿಕಾ ಚಟುವಟಿಕೆಗಳ ಬೆಳವಣಿಗೆ ಪ್ರಮಾಣವು ನವೆಂಬರ್‌ನಲ್ಲಿ ಶೇ 6.7ರಷ್ಟಾಗಿದೆ’ ಎಂದು ಎನ್‌ಎಸ್‌ಒ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.