ADVERTISEMENT

18 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಕೈಗಾರಿಕಾ ಉತ್ಪಾದನೆ

ಪಿಟಿಐ
Published 12 ಅಕ್ಟೋಬರ್ 2022, 15:56 IST
Last Updated 12 ಅಕ್ಟೋಬರ್ 2022, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇಕಡ 0.8ರಷ್ಟು ಕುಸಿದಿದ್ದು, 18 ತಿಂಗಳ ಕನಿಷ್ಠ ಮಟ್ಟ ಇದು. 2021ರ ಫೆಬ್ರುವರಿಯಲ್ಲಿ ವಲಯದ ಬೆಳವಣಿಗೆಯು ಶೇ 3.2ರಷ್ಟು ಕುಸಿದಿತ್ತು ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ತಯಾರಿಕೆ ಮತ್ತು ಗಣಿ ವಲಯಗಳ ಬೆಳವಣಿಗೆ ಇಳಿಕೆ ಆಗಿರುವುದೇ ಇದಕ್ಕೆ ಕಾರಣ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕೆಗಳ ಬೆಳವಣಿಗೆಯು 2021ರ ಆಗಸ್ಟ್‌ನಲ್ಲಿ ಶೇ 13ರಷ್ಟು ಇತ್ತು.

ತಯಾರಿಕಾ ವಲಯವು ಶೇ 0.7ರಷ್ಟು ಕುಸಿದಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ 11.1ರಷ್ಟು ಬೆಳವಣಿಗೆ ಕಂಡಿತ್ತು. ವಿದ್ಯುತ್ ವಲಯವು ಶೇ 1.4ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ 16ರಷ್ಟು ಏರಿಕೆ ಕಂಡಿತ್ತು. ಬಂಡವಾಳ ಸರಕುಗಳ ವಲಯದ ಬೆಳವಣಿಗೆ ಶೇ 5ರಷ್ಟು ಆಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ 20ರಷ್ಟು ಇತ್ತು.

ADVERTISEMENT

ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಐಐಪಿ ಶೇ 7.7ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 29ರಷ್ಟು ಬೆಳವಣಿಗೆ ಕಂಡಿತ್ತು.

ಅಗತ್ಯ ವಸ್ತುಗಳ (ಪ್ರಾಥಮಿಕ ಸರಕುಗಳು) ವಲಯವು ಶೇ 1.7ರಷ್ಟು ಅಲ್ಪ ಬೆಳವಣಿಗೆ ಸಾಧಿಸಿದೆ. 2021ರ ಆಗಸ್ಟ್‌ನಲ್ಲಿ ಶೇ 16.9ರಷ್ಟು ಬೆಳವಣಿಗೆ ಕಂಡಿತ್ತು. 2020ರ ಮಾರ್ಚ್‌ನಿಂದ ಕೋವಿಡ್‌ ಸಾಂಕ್ರಾಮಿಕ ಆರಂಭ ಆಗಿದ್ದರಿಂದ ಕಳೆದ ವರ್ಷದ ಆಗಸ್ಟ್‌ನೊಂದಿಗೆ ಈ ವರ್ಷದ ಆಗಸ್ಟ್‌ನ ಅಂಕಿ–ಅಂಶಗಳನ್ನು ಹೋಲಿಸುವುದು ಸರಿಯಾಗುವುದಿಲ್ಲ ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.