ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ಏಳು ತಿಂಗಳ ಕನಿಷ್ಠ ಮಟ್ಟವಾದ ಶೇ 3.61ರಷ್ಟು ದಾಖಲಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿರುವ ಶೇ 4ರ ಗುರಿಗಿಂತಲೂ ಕಡಿಮೆಯಾಗಿದೆ.
ಕಳೆದ ತಿಂಗಳು ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರವನ್ನು ಶೇ 0.25ರಷ್ಟು ಕಡಿತಗೊಳಿಸಿತ್ತು. ಚಿಲ್ಲರೆ ಹಣದುಬ್ಬರವು ನಿಗದಿತ ಗುರಿಯೊಳಗೆ ದಾಖಲಾದರೆ ಮತ್ತೆ ಬಡ್ಡಿದರ ಇಳಿಕೆ ಮಾಡುವ ಬಗ್ಗೆ ಭರವಸೆ ನೀಡಿತ್ತು. ಸದ್ಯ ಹಣದುಬ್ಬರ ಇಳಿಕೆಯಾಗಿದೆ. ಹಾಗಾಗಿ, ಏಪ್ರಿಲ್ 9ರಂದು ನಡೆಯುವ ಸಭೆಯಲ್ಲಿ ಮತ್ತೆ ರೆಪೊ ದರ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ತರಕಾರಿಗಳು, ಮೊಟ್ಟೆ, ಮಾಂಸ, ಮೀನು, ದ್ವಿದಳ ಧಾನ್ಯ ಮತ್ತು ಸರಕುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಕಡಿಮೆಯಾಗಿರುವುದೇ ಹಣದುಬ್ಬರದ ಇಳಿಕೆಗೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬುಧವಾರ ತಿಳಿಸಿದೆ.
ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.26ರಷ್ಟು ದಾಖಲಾಗಿತ್ತು. ಕಳೆದ ವರ್ಷದ ಫೆಬ್ರುವರಿಯಲ್ಲಿ ಶೇ 5.09ರಷ್ಟಿತ್ತು. ಕಳೆದ ವರ್ಷದ ನವೆಂಬರ್‌ನಿಂದ ಆರ್‌ಬಿಐ ನಿಗದಿಪಡಿಸಿರುವ ಗುರಿಯಲ್ಲಿಯೇ ದಾಖಲಾಗುತ್ತಿದೆ ಎಂದು ವಿವರಿಸಿದೆ.
ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಹಣದುಬ್ಬರವು ಶೇ 0.65ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಜುಲೈ ನಂತರ ದಾಖಲಾಗಿರುವ ಕನಿಷ್ಠ ಮಟ್ಟ ಇದಾಗಿದೆ ಎಂದು ತಿಳಿಸಿದೆ.
ಆಹಾರ ಪದಾರ್ಥಗಳ ಬೆಲೆ ಇಳಿಕೆ
ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಆಹಾರ ಹಣದುಬ್ಬರದಲ್ಲಿ ಶೇ 2.22ರಷ್ಟು ಇಳಿಕೆಯಾಗಿದೆ. ಜನವರಿಯಲ್ಲಿ ಆಹಾರ ಪದಾರ್ಥಗಳ ಬೆಲೆಯು ಶೇ 5.97ರಷ್ಟಿತ್ತು. ಫೆಬ್ರುವರಿಯಲ್ಲಿ ಶೇ 3.75ಕ್ಕೆ ತಗ್ಗಿದೆ. ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಜನವರಿಯಲ್ಲಿ ನಗರ ಪ್ರದೇಶದಲ್ಲಿ ಶೇ 3.87ರಷ್ಟಿದ್ದ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 3.32ಕ್ಕೆ ತಗ್ಗಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 5.53ರಿಂದ ಶೇ 3.20ಕ್ಕೆ ಇಳಿದಿದೆ.
ಗ್ರಾಮೀಣ ಪ್ರದೇಶದಲ್ಲಿ ಆಹಾರ ಪದಾರ್ಥಗಳ ಬೆಲೆಯು ಶೇ 4.59ರಿಂದ ಶೇ 3.79ಕ್ಕೆ ಇಳಿದಿದೆ.
ರಾಜ್ಯವಾರು ಪಟ್ಟಿಯಲ್ಲಿ ತೆಲಂಗಾಣದಲ್ಲಿ (ಶೇ 1.31ರಷ್ಟು) ಕಡಿಮೆ ಹಣದುಬ್ಬರ ದಾಖಲಾಗಿದ್ದರೆ, ಕೇರಳದಲ್ಲಿ (ಶೇ 7.31ರಷ್ಟು) ಅತಿಹೆಚ್ಚು ದಾಖಲಾಗಿದೆ.
ಇಳಿಕೆ: ಮೊಟ್ಟೆ, ಶುಂಠಿ, ಜೀರಿಗೆ, ಟೊಮೆಟೊ, ಬೆಳ್ಳುಳ್ಳಿ
ಏರಿಕೆ: ಕೊಬ್ಬರಿ ಎಣ್ಣೆ, ತೆಂಗಿನಕಾಯಿ, ಚಿನ್ನ, ಬೆಳ್ಳಿ, ಈರುಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.