ADVERTISEMENT

ದಂಡ ಪಾವತಿಗೆ ಇನ್ಫೊಸಿಸ್‌ ಸಮ್ಮತಿ

ಕ್ಯಾಲಿಫೋರ್ನಿಯಾಕ್ಕೆ ₹ 5.68 ಕೋಟಿ ನೀಡಲಿರುವ ಕಂಪನಿ

ಪಿಟಿಐ
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST
ಇನ್ಫೊಸಿಸ್‌
ಇನ್ಫೊಸಿಸ್‌   

ವಾಷಿಂಗ್ಟನ್‌/ನವದೆಹಲಿ: ವೀಸಾ ನಿಯಮ ಉಲ್ಲಂಘನೆ ಮತ್ತು ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕ್ಯಾಲಿಫೋರ್ನಿಯಾ ಸರ್ಕಾರಕ್ಕೆ ₹ 5.6 ಕೋಟಿ ದಂಡ ಪಾವತಿಸಲು ಪ್ರತಿಷ್ಠಿತ ಐ.ಟಿ. ಕಂಪನಿ ಇನ್ಫೊಸಿಸ್‌ ಒಪ್ಪಿಗೆ ಸೂಚಿಸಿದೆ.

‘ಯಾವುದೇ ರೀತಿಯ ನಿಯಮ ಉಲ್ಲಂಘನೆ ಮಾಡಿಲ್ಲ. ಅನ್ವಯವಾಗುವ ಎಲ್ಲಾ ನಿಯಮಗಳು ಮತ್ತು ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿದೆ’ ಎಂದು ಕಂಪನಿ ತಿಳಿಸಿದೆ.

‘2006 ರಿಂದ 2017ರ ಅವಧಿಯಲ್ಲಿ 500 ಸಿಬ್ಬಂದಿಯನ್ನು ಎಚ್‌–1ಬಿ ವೀಸಾದ ಬದಲಿಗೆ ಬಿ–1 ವೀಸಾ ನೀಡಿ ಇನ್ಫೊಸಿಸ್‌ ಕಂಪನಿಯು ಕ್ಯಾಲಿಫೋರ್ನಿಯಾಕ್ಕೆ ಕರೆತಂದಿತ್ತು’ ಎಂದು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌ ಕ್ಸೇವಿಯರ್‌ ಬಿ ಅವರು ಹೇಳಿದ್ದಾರೆ.

ADVERTISEMENT

‘ಈ ರೀತಿ ವೀಸಾ ನಿಯಮ ಉಲ್ಲಂಘಿಸುವ ಮೂಲಕ ಕಂಪನಿಯು ಕ್ಯಾಲಿಫೋರ್ನಿಯಾದ ವೇತನ ತೆರಿಗೆಗಳನ್ನು ಪಾವತಿಸುವುದರಿಂದ ತಪ್ಪಿಸಿಕೊಂಡಿತ್ತು’ ಎಂದು ಅವರು ತಿಳಿಸಿದ್ದಾರೆ.

ಆರೋಪಗಳಿಂದ ಹೊರಬರಲು ನ್ಯೂಯಾರ್ಕ್‌ ರಾಜ್ಯಕ್ಕೆ₹ 7 ಕೋಟಿ ನೀಡಲು2017ರಲ್ಲಿಯೇ ಒಪ್ಪಿಗೆ ನೀಡಲಾಗಿತ್ತು.

ಕ್ಯಾಲಿಫೋರ್ನಿಯಾದಲ್ಲಿನ ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್‌ನಲ್ಲಿ ಇತ್ಯರ್ಥ ಮಾಡಿಕೊಳ್ಳಲಾಗಿತ್ತು. ಅದನ್ನು ಈಗ ಮಾಧ್ಯಮದ ಎದುರು ಬಿಡುಗಡೆ ಮಾಡಲಾಗಿದೆ.

ಇನ್ಫೊಸಿಸ್‌ನ ಮಾಜಿ ಉದ್ಯೋಗಿ ಜಾಕ್‌ ಪಾಮರ್‌ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಕ್ಯಾಲಿಫೋರ್ನಿಯಾ ಸರ್ಕಾರವು ಕಂಪನಿಯ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.