ADVERTISEMENT

‘ಕೈಗಾರಿಕೆಗಳಿಂದ ಪ್ರಗತಿ’ | ಮೂಲಸೌಕರ್ಯಕ್ಕೆ ಆದ್ಯತೆ: ನೀತಿ ಆಯೋಗ ಶಿಫಾರಸು

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 21:14 IST
Last Updated 17 ಜುಲೈ 2020, 21:14 IST
ಅಮಿತಾಬ್ ಕಾಂತ್
ಅಮಿತಾಬ್ ಕಾಂತ್   

ನವದೆಹಲಿ: ‘ಕೋವಿಡೋತ್ತರ ಜಗತ್ತಿನಲ್ಲಿ ಭಾರತದ ಉದ್ದಿಮೆಗಳ ಸ್ವರೂಪ ಬದಲಾಗಲಿದೆ. ಆರ್ಥಿಕತೆಯನ್ನು ಉತ್ತೇಜಿಸಲು ಸರ್ಕಾರವು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಕಚ್ಚಾವಸ್ತುಗಳ ಮರುಬಳಕೆಗೆ ಆದ್ಯತೆ ನೀಡಬೇಕಿದೆ. ಇದಕ್ಕೆ ಸಂಬಂಧಿಸಿದ ಕೈಗಾರಿಕೆಗಳು ಮುಂದಿನ ಹಂತದಲ್ಲಿ ಭಾರತದ ಆರ್ಥಿಕತೆಯನ್ನು ಪ್ರಗತಿಯತ್ತ ಒಯ್ಯಲಿವೆ’ ಎಂದು ನೀತಿ ಆಯೋಗವು ಹೇಳಿದೆ.

‘ಅಭಿವೃದ್ಧಿ ಕಾರ್ಯಗಳಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರವು ಒತ್ತು ನೀಡಬೇಕು. ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಕಾಗದ, ಪ್ಲಾಸ್ಟಿಕ್ ಮತ್ತು ಲೋಹದ ವೆಚ್ಚವನ್ನು ಕಡಿಮೆ ಮಾಡಬೇಕು. ಈ ಯೋಜನೆಗಳಲ್ಲಿ ಮರುಬಳಕೆ ಮಾಡಲಾದ ಕಚ್ಚಾವಸ್ತುಗಳನ್ನು ಬಳಸಬೇಕು. ಆ ಮೂಲಕ ಯೋಜನೆಗಳ ವೆಚ್ಚವನ್ನು ತಗ್ಗಿಸಬೇಕು’ ಎಂದು ನೀತಿ ಆಯೋಗವು ಶಿಫಾರಸು ಮಾಡಿದೆ.

‘ಮರುಬಳಕೆ ಉದ್ಯಮಗಳಿಗೆ ಅಗತ್ಯ ಗಮನ ನೀಡುತ್ತಿಲ್ಲ. ಈ ವಲಯಕ್ಕೆ ಒಂದು ಸಚಿವಾಲಯ ಇಲ್ಲದೇ ಇರುವುದರಿಂದಲೇ ಈ ಸ್ಥಿತಿ ಇದೆ. ಮರುಬಳಕೆ ಎನ್ನುವುದು ಸಂಪತ್ತಿನ ಸೃಷ್ಟಿಕರ್ತ. ಮರುಬಳಕೆ ಉದ್ದಿಮೆ ವಲಯವನ್ನು ಸುಧಾರಿಸಲು ಎಲ್ಲಾ ಸಚಿವಾಲಯಗಳ ಮೂಲಕ ಅಗತ್ಯ ಬೆಂಬಲ ಒದಗಿಸಲು ನೀತಿ ಆಯೋಗವು ದುಡಿಯಲಿದೆ’ ಎಂದು ಆಯೋಗದ ಸಿಇಒ ಅಮಿತಾಭ್‌ ಕಾಂತ್ ಹೇಳಿದ್ದಾರೆ.

ADVERTISEMENT

‘ಜಾಗತಿಕ ಆರ್ಥಿಕ ಬೆಳವಣಿಗೆಗೆ ಕೋವಿಡ್‌–19 ತಡೆಒಡ್ಡಿದೆ. ಆದರೆ ಇದೇ ಸಂದರ್ಭದಲ್ಲಿ ಭಾರತದ ಮೂಲಸೌಕರ್ಯ ಅಭಿವೃದ್ಧಿ ವಲಯ ಮತ್ತು ಕೈಗಾರಿಕೆಗಳು ಪ್ರಗತಿಯ ಹಾದಿಯಲ್ಲಿವೆ. ಈ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳು ನಡೆಯುತ್ತಿವೆ. ಔಷಧ ಉದ್ದಿಮೆ ಮತ್ತು ವೈದ್ಯಕೀಯ ಉಪಕರಣ ತಯಾರಿಕೆ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ಬಂದಿದೆ. ಇದನ್ನು ಸರಿದಾರಿಯಲ್ಲಿ ಒಯ್ಯಬೇಕು’ ಎಂದು ನೀತಿ ಆಯೋಗವು ಹೇಳಿದೆ.

‘ಭಾರತದ ಉದ್ದಿಮೆಗಳು ತಮ್ಮ ವ್ಯವಹಾರ ಮತ್ತು ಕಾರ್ಯಾಚರಣೆಯ ಸ್ವರೂಪವನ್ನು ಬದಲಿಸುವತ್ತ ಗಮನಹರಿಸುತ್ತಿವೆ. ಕೃತಕ ಬುದ್ಧಿಮತ್ತೆ ಅಳವಡಿಕೆಗೆ ವೇಗ ದೊರೆತಿದೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ ವಲಯದಲ್ಲಿ ತಂತ್ರಜ್ಞಾನ ಆಧರಿತ ಉತ್ಪನ್ನಗಳು ಮತ್ತು ಸೇವೆಗಳಿಗೆ ಆದ್ಯತೆ ದೊರೆಯುತ್ತಿದೆ. ಇದು ಹೊಸ ಸಂಶೋಧನೆಗೆ ಹಾದಿಮಾಡಿಕೊಡುತ್ತಿದೆ’ ಎಂದು ಆಯೋಗವು ವಿವರಿಸಿದೆ.

‘ಕೈಗಾರಿಕೆಗಳಲ್ಲಿ ಗರಿಷ್ಠ ಪ್ರಮಾಣದ ಆಟೊಮೇಷನ್‌ (ಸ್ವಯಂಚಾಲಿತ ವ್ಯವಸ್ಥೆ), ‘ಇಂಟರ್‌ನೆಟ್ ಆಫ್‌ ಥಿಂಗ್ಸ್‌’ ಅಳವಡಿಕೆ, ಮೂಲಸೌಕರ್ಯಗಳ ಕ್ಷಮತೆಯನ್ನು ಹೆಚ್ಚಿಸುವ ಅನ್ವೇಷನೆಗಳು ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಈಗ ಗಮನ ಕೇಂದ್ರೀಕೃತವಾಗಿದೆ. ಸರ್ಕಾರವೂ ಇತ್ತ ಗಮನಹರಿಸಬೇಕು’ ಎಂದು ಆಯೋಗವು ಹೇಳಿದೆ.

***

ಮರುಬಳಕೆ ಉದ್ಯಮ ವಲಯವು ಪ್ರಗತಿ ಸಾಧಿಸಬೇಕೆಂದರೆ ಕಾನೂನಿನ ನೆರವು ಬೇಕಿದೆ. ಇದಕ್ಕಾಗಿ ಸರ್ಕಾರವು ಸಚಿವಾಲಯವನ್ನು ಆರಂಭಿಸಬೇಕಿದೆ.
-ಅಮಿತಾಭ್‌ ಕಾಂತ್, ನೀತಿ ಆಯೋಗದ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.