ADVERTISEMENT

Coffee Day: ಕಾಫಿ ಡೇ ವಿರುದ್ಧದ ದಿವಾಳಿ ಪ್ರಕ್ರಿಯೆ ಮತ್ತೆ ಆರಂಭ

ಪಿಟಿಐ
Published 24 ಫೆಬ್ರುವರಿ 2025, 10:38 IST
Last Updated 24 ಫೆಬ್ರುವರಿ 2025, 10:38 IST
ವಿಜಯನಗರದ ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿಯ ಕಾಫಿ ಡೇ ಮಳಿಗೆ.
ವಿಜಯನಗರದ ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿಯ ಕಾಫಿ ಡೇ ಮಳಿಗೆ.   

ನವದೆಹಲಿ: ಕೆಫೆ ಕಾಫಿ ಡೇ ಮಳಿಗೆಗಳ ಮಾಲೀಕತ್ವ ಹೊಂದಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಕಂಪನಿಯ ವಿರುದ್ಧ ದಿವಾಳಿ ಸಂಹಿತೆಯ ಅಡಿಯಲ್ಲಿನ ಪ್ರಕ್ರಿಯೆಗಳು ಮತ್ತೆ ಚಾಲನೆ ಪಡೆದಿವೆ.

ಸುಪ್ರೀಂ ಕೋರ್ಟ್‌ ನಿಗದಿ ಮಾಡಿದ್ದ ಗಡುವಾದ ಫೆಬ್ರುವರಿ 21ಕ್ಕೆ ಮೊದಲು ಆದೇಶ ನೀಡಲು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ (ಎನ್‌ಸಿಎಲ್‌ಎಟಿ) ಸಾಧ್ಯವಾಗಿಲ್ಲ. ಹೀಗಾಗಿ ದಿವಾಳಿ ಸಂಹಿತೆಯ ಅಡಿಯಲ್ಲಿನ ಪ್ರಕ್ರಿಯೆಗಳು ಪುನರಾರಂಭ ಆಗಿವೆ.

ಅಮಾನತುಗೊಂಡಿರುವ ಮಂಡಳಿಯ ನಿರ್ದೇಶಕರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಎನ್‌ಸಿಎಲ್‌ಎಟಿ ಚೆನ್ನೈ ಪೀಠವು ಕಳೆದ ವಾರ ಪೂರ್ಣಗೊಳಿಸಿ, ಆದೇಶ ಕಾಯ್ದರಿಸಿತ್ತು ಎಂದು ಸಿಡಿಇಎಲ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

‘ಮೇಲ್ಮನವಿಯು ಫೆಬ್ರುವರಿ 21ರವರೆಗೆ ಇತ್ಯರ್ಥ ಆಗಿಲ್ಲ. ಹೀಗಾಗಿ, ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯು ತೆರವಾಗುತ್ತದೆ. ಇದರ ಪರಿಣಾಮವಾಗಿ, ದಿವಾಳಿ ‍ಪ್ರಕ್ರಿಯೆ ಪುನರಾರಂಭ ಆಗುತ್ತದೆ...’ ಎಂದು ಅದು ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.

ಎನ್‌ಸಿಎಲ್‌ಎಟಿ ತನ್ನ ಆದೇಶವನ್ನು ಕಾಯ್ದಿರಿಸಿದ್ದು, ಅದನ್ನು ಇನ್ನಷ್ಟೇ ಪ್ರಕಟಿಸಬೇಕಿದೆ ಎಂದು ತಿಳಿಸಿದೆ.

ಸಿಡಿಇಎಲ್‌ ಕಂಪನಿಯು ₹228.45 ಕೋಟಿ ಪಾವತಿ ಬಾಕಿ ಇರಿಸಿಕೊಂಡಿದೆ ಎಂದು ಆರೋಪಿಸಿ ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್‌ ಲಿಮಿಟೆಡ್‌ (ಐಡಿಬಿಐಟಿಎಸ್‌ಎಲ್‌), ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಎನ್‌ಸಿಎಲ್‌ಟಿ, ಮಧ್ಯಂತರ ಪರಿಹಾರಕ್ಕೆ ವೃತ್ತಿಪರರನ್ನು (ಐಆರ್‌ಪಿ) ನೇಮಕ ಮಾಡಿತ್ತು.

ಅಮಾನತುಗೊಂಡ ಆಡಳಿತ ಮಂಡಳಿಯು ಎನ್‌ಸಿಎಲ್‌ಟಿ ಆದೇಶವನ್ನು ಎನ್‌ಸಿಎಲ್‌ಎಟಿ ಮುಂದೆ ಪ್ರಶ್ನಿಸಿತ್ತು. ಬೆಂಗಳೂರು ಪೀಠದ ಆದೇಶಕ್ಕೆ ಎನ್‌ಸಿಎಲ್‌ಎಟಿ ತಡೆ ನೀಡಿತ್ತು.

ಈ ತಡೆಯಾಜ್ಞೆಯನ್ನು ಐಡಿಬಿಐಟಿಎಸ್‌ಎಲ್‌, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಮೇಲ್ಮನವಿಯನ್ನು ಫೆಬ್ರುವರಿ 21ಕ್ಕೆ ಮೊದಲು ಇತ್ಯರ್ಥಪಡಿಸಬೇಕು ಎಂದು ಎನ್‌ಸಿಎಲ್‌ಎಟಿ ಚೆನ್ನೈ ಪೀಠಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಫೆಬ್ರುವರಿ 21ಕ್ಕೆ ಮೊದಲು ಮೇಲ್ಮನವಿ ಇತ್ಯರ್ಥ ಆಗದಿದ್ದಲ್ಲಿ, ಎನ್‌ಸಿಎಲ್‌ಎಟಿ ನೀಡಿರುವ ತಡೆ ತಾನಾಗಿಯೇ ತೆರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಆಗ ಸ್ಪಷ್ಟಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.