ADVERTISEMENT

ಭವಿಷ್ಯನಿಧಿ: ಶೇ 8.65ರ ಬಡ್ಡಿ ಶೀಘ್ರ ಅಧಿಸೂಚನೆ

ಪಿಟಿಐ
Published 30 ಆಗಸ್ಟ್ 2019, 19:30 IST
Last Updated 30 ಆಗಸ್ಟ್ 2019, 19:30 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನಿಗದಿಪಡಿಸಿರುವ ಶೇ 8.65 ಬಡ್ಡಿ ದರ ಕುರಿತು ಕಾರ್ಮಿಕ ಸಚಿವಾಲಯವುಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ.

ಭವಿಷ್ಯ ನಿಧಿ ಸಂಘಟನೆಯ 6 ಕೋಟಿಗೂ ಹೆಚ್ಚು ಸದಸ್ಯರ ಖಾತೆಗೆ ಹೊಸ ಬಡ್ಡಿ ಸೇರ್ಪಡೆ ಮಾಡಲು ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಬೇಕಾಗುತ್ತದೆ.

‘ಈ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ವಿರೋಧಿಸಿಲ್ಲ. ಈಗಾಗಲೇ ಅದು ಸಮ್ಮತಿ ನೀಡಿದೆ. ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.

ADVERTISEMENT

2018–19ನೆ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಭವಿಷ್ಯ ನಿಧಿಯಿಂದ ಹಣ ಹಿಂದೆ ಪಡೆಯುವ ಪ್ರಕರಣಗಳಲ್ಲಿ ಸದ್ಯಕ್ಕೆ ಶೇ 8.55ರ ಬಡ್ಡಿ ದರವನ್ನೇ ಪರಿಗಣಿಸಲಾಗುತ್ತಿದೆ. ಈ ಬಡ್ಡಿ ದರವನ್ನು 2017–18ನೆ ಹಣಕಾಸು ವರ್ಷದಲ್ಲಿ ನಿಗದಿಪಡಿಸಲಾಗಿತ್ತು.

2018–19ನೆ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಬಡ್ಡಿ ದರ ಪರಿಷ್ಕರಿಸಲಾಗಿತ್ತು. 2017–18ರಲ್ಲಿದ್ದ ಶೇ 8.55 ಬಡ್ಡಿ ದರವನ್ನು ಶೇ 0.10ರಷ್ಟು ಹೆಚ್ಚಿಸಿ ಶೇ 8.65ಕ್ಕೆ ಏರಿಕೆ ಮಾಡಲಾಗಿತ್ತು. ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹಣಕಾಸು ಸಚಿವಾಲಯದಲ್ಲಿನ ಹಣಕಾಸು ಸೇವೆಗಳ ಇಲಾಖೆಯು ಏಪ್ರಿಲ್‌ನಲ್ಲಿ ಇದಕ್ಕೆ ತನ್ನ ಅನುಮೋದನೆ ನೀಡಿತ್ತು.

ಭವಿಷ್ಯ ನಿಧಿ ಸಂಘಟನೆಯು, ಇದಕ್ಕೂ ಮೊದಲು 2015–16ರಲ್ಲಿದ್ದ ಶೇ 8.8ರಷ್ಟು ಬಡ್ಡಿ ದರವನ್ನು 2016–17ರಲ್ಲಿ ಶೇ 8.65ಕ್ಕೆ ಇಳಿಸಿತ್ತು. 2017–18ರಲ್ಲಿನ ಶೇ 8.55ರಷ್ಟು ಬಡ್ಡಿ ದರವು ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.