ಇನ್ವೆಸ್ಟ್ ಕರ್ನಾಟಕ–2025ರ ಅಂಗವಾಗಿ ನಡೆದ ಗೋಷ್ಠಿಯಲ್ಲಿ ಅರ್ಥಶಾಸ್ತ್ರಜ್ಞ ಸೈಮನ್ ಲಾಂಗ್, ಸಿಸ್ಕೊ ಇಂಡಿಯಾ ಅಧ್ಯಕ್ಷೆ ಡೈಸಿ ಚಿಟ್ಟಿಲಪಲ್ಲಿ, ಐಬಿಎಂ ಕನ್ಸೆಲ್ಟಿಂಗ್‌ನ ಪಾಲುದಾರ ರಾಮಿ ಅಹೋಲಾ ಇಂಟರ್‌ನ್ಯಾಷನಲ್ ಕೌನ್ಸಿಲ್ ಫಾರ್ ಸರ್ಕ್ಯುಲರ್ ಎಕಾನಮಿಯ ವ್ಯವಸ್ಥಾಪಕ ನಿರ್ದೇಶಕಿ ಶಾಲಿನಿ ಗೋಯಲ್ ಭಲ್ಲಾ ಮತ್ತು ಇತರರು ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕೇಂದ್ರ ಸರ್ಕಾರವು 2030ರೊಳಗೆ 500 ಗಿಗಾವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಪ್ರತಿ ವಲಯದಲ್ಲೂ ಹಸಿರು ಇಂಧನ ಬಳಕೆಗೆ ಒತ್ತು ನೀಡಿದೆ’ ಎಂದು ಇಂಟರ್‌ನ್ಯಾಷನಲ್ ಕೌನ್ಸಿಲ್ ಫಾರ್ ಸರ್ಕ್ಯುಲರ್ ಎಕಾನಮಿಯ (ಐಸಿಸಿಇ) ವ್ಯವಸ್ಥಾಪಕ ನಿರ್ದೇಶಕಿ ಶಾಲಿನಿ ಗೋಯಲ್ ಭಲ್ಲಾ ಹೇಳಿದರು.
ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ‘ಸುಸ್ಥಿರ ತಯಾರಿಕೆ–ಜಾಗತಿಕ ಮಟ್ಟದಲ್ಲಿ ಹಸಿರು ಇಂಧನ ಉತ್ಪಾದನೆಯ ಬೆಳವಣಿಗೆ’ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಅಗತ್ಯವಿರುವ ಕೌಶಲಾಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ. ದೇಶದಲ್ಲಿ ಶಕ್ತಿ ಪರಿವರ್ತನೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುತ್ತಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಅಗತ್ಯ ಕ್ರಮಕೈಗೊಂಡಿದೆ. ಇದು ಕೇಂದ್ರದ ವಿಕಸಿತ ಭಾರತದ ಆಶಯಕ್ಕೆ ಪೂರಕವಾಗಿದೆ ಎಂದು ಹೇಳಿದರು.
ದೇಶದ ಹಸಿರು ಇಂಧನ ವಲಯದಲ್ಲಿ 2070ರ ವೇಳೆಗೆ ಐದು ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ಸಿಸ್ಕೊ ಇಂಡಿಯಾ ಹಾಗೂ ಎಸ್‌ಎಎಆರ್‌ಸಿ ಅಧ್ಯಕ್ಷೆ ಡೈಸಿ ಚಿತ್ತಿಲಪಿಲ್ಲಿ ಮಾತನಾಡಿ, ‘ಸರ್ಕಾರವು ಹಂತ ಹಂತವಾಗಿ ದೇಶದಲ್ಲಿ ಇಂಧನ ಹೊರಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಹಸಿರು ಇಂಧನ ವಲಯದಲ್ಲಿರುವ ಉದ್ದಿಮೆಗಳಿಗೆ ಸಹಾಯಧನ ಸೇರಿದಂತೆ ಅಗತ್ಯ ಆರ್ಥಿಕ ನೆರವು ನೀಡಬೇಕಿದೆ’ ಎಂದು ಹೇಳಿದರು.
ಐಬಿಎಂ ಕನ್ಸೆಲ್ಟಿಂಗ್‌ನ ಪಾಲುದಾರ ರಾಮಿ ಅಹೋಲಾ, ಗೋದ್ರೇಜ್ ಅಗ್ರೊವೆಟ್ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಬುರ್ಜಿಸ್ ಗೋದ್ರೇಜ್ ಇದ್ದರು. ಅರ್ಥಶಾಸ್ತ್ರಜ್ಞ ಸಿಮೊನ್ ಲಾಂಗ್ ಸಂವಾದವನ್ನು ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.