ADVERTISEMENT

ಚಿನ್ನದ ಇಟಿಎಫ್‌: ಫೆಬ್ರುವರಿಯಲ್ಲಿ ₹ 491 ಕೋಟಿ ಹೂಡಿಕೆ

ಪಿಟಿಐ
Published 11 ಮಾರ್ಚ್ 2021, 15:43 IST
Last Updated 11 ಮಾರ್ಚ್ 2021, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೂಡಿಕೆದಾರರು ಫೆಬ್ರುವರಿಯಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ₹ 491 ಕೋಟಿ ಹೂಡಿಕೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ, ರೂಪಾಯಿ ಮೌಲ್ಯ ವೃದ್ಧಿ ಮತ್ತು ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕ ಇಳಿಕೆಯ ಕಾರಣಗಳಿಂದ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಮುಖವಾಗಿತ್ತು. ಇದರ ಪ್ರಯೋಜನ ಪಡೆದುಕೊಳ್ಳಲು ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಆಗಿದೆ ಎಂದು ತಜ್ಞರು ಹೇಳಿದ್ದಾರೆ.

ಜನವರಿಯಲ್ಲಿ ₹ 625 ಕೋಟಿ ಹೂಡಿಕೆ ಆಗಿತ್ತು ಎನ್ನುವ ಮಾಹಿತಿಯು ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟದಲ್ಲಿದೆ. 2020ರಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಒಟ್ಟಾರೆ ₹ 6,657 ಕೋಟಿ ಹೂಡಿಕೆ ಆಗಿತ್ತು.

ಕಳೆದ ಕೆಲವು ವರ್ಷಗಳ ಅತ್ಯಂತ ಸವಾಲಿನ ಹೂಡಿಕೆಯ ವಾತಾವರಣದಲ್ಲಿ ಚಿನ್ನವು ಉತ್ತಮ ಗಳಿಕೆ ತಂದುಕೊಟ್ಟಿದೆ. ನಿರೀಕ್ಷಿತವಾಗಿಯೇ, ಹೂಡಿಕೆದಾರರನ್ನು ತನ್ನತ್ತ ಸೆಳೆದಿದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಕಳೆದ ಆಗಸ್ಟ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನದ ದರವು ಈಗ ಇಳಿಕೆ ಕಂಡಿದ್ದು, ಹೂಡಿಕೆದಾರರಿಗೆ ಉತ್ತಮ ಅವಕಾಶ ಸಿಕ್ಕಿದೆ. ಇದರಿಂದಾಗಿಯೇ ಫೆಬ್ರುವರಿಯಲ್ಲಿ ಒಳಹರಿವು ಕಂಡುಬಂದಿದೆ ಎಂದೂ ಅವರು ತಿಳಿಸಿದ್ದಾರೆ.

ಚಿನ್ನದ ಇಟಿಎಫ್‌ನ ನಿರ್ವಹಣಾ ಸಂಪತ್ತು ಮೌಲ್ಯವು ಜನವರಿ ತಿಂಗಳ ಅಂತ್ಯದಲ್ಲಿ ಇದ್ದ ₹ 14,481 ಕೋಟಿಗೆ ಹೋಲಿಸಿದರೆ ಫೆಬ್ರುವರಿ ತಿಂಗಳ ಅಂತ್ಯಕ್ಕೆ ₹ 14,102 ಕೋಟಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.