ADVERTISEMENT

ಪೇಟೆ ಹೂಡಿಕೆದಾರರಿಗೆ₹ 1.24 ಲಕ್ಷ ಕೋಟಿ ನಷ್ಟ

ಅಮೆರಿಕ–ಚೀನಾ ವಾಣಿಜ್ಯ ಸಮರದ ಪರಿಣಾಮ

ಪಿಟಿಐ
Published 6 ಮೇ 2019, 18:19 IST
Last Updated 6 ಮೇ 2019, 18:19 IST

ನವದೆಹಲಿ/ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಡೆದ ನಕಾರಾತ್ಮಕ ವಹಿವಾಟಿನಿಂದ ಹೂಡಿಕೆದಾರರ ಸಂಪತ್ತು ₹ 1.24 ಲಕ್ಷ ಕೋಟಿಗಳಷ್ಟು ಕರಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹ 150.37 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಸಮರ ನಡೆಯುವ ಸಾಧ್ಯತೆ ಕಂಡುಬಂದಿದೆ. ಚೀನಾದ ಸರಕುಗಳ ಮೇಲೆ ಇನ್ನೂ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕ ಘೋಷಿಸಿದೆ. ಇದು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 363 ಅಂಶಗಳಷ್ಟು ಕರಗಿ 38,600 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 114 ಅಂಶ ಇಳಿಕೆ ಕಂಡು 11,598 ಅಂಶಗಳಿಗೆ ಇಳಿಕೆಯಾಗಿದೆ.

ಭಾರತದ ಷೇರುಪೇಟೆಗಳು ಏಷ್ಯಾದ ಷೇರುಪೇಟೆಗಳಲ್ಲಿ ನಡೆದ ಚಂಚಲ ವಹಿವಾಟಿನ ಪ್ರಭಾವಕ್ಕೆ ಒಳಗಾದವು. ರೂಪಾಯಿ ಮೌಲ್ಯದಲ್ಲಿ ಇಳಿಕೆ ಮತ್ತು ತ್ರೈಮಾಸಿಕದ ಮಿಶ್ರಫಲವೂ ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ರೂಪಾಯಿ ಮೌಲ್ಯ ಇಳಿಕೆ: ರೂಪಾಯಿ ಸಹ ಅಮೆರಿಕ–ಚೀನಾ ವಾಣಿಜ್ಯ ಸಮರದ ಪ್ರಭಾವಕ್ಕೆ ಒಳಗಾಯಿತು. ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 69.40ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.