ADVERTISEMENT

ಹೂಡಿಕೆದಾರರ ಸಂಪತ್ತು ₹ 6.22 ಲಕ್ಷ ಕೋಟಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 18:11 IST
Last Updated 9 ಏಪ್ರಿಲ್ 2022, 18:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂಬೈ ಷೇರುಪೇಟೆಯ ವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯವಾಗಿದೆ. ಹೀಗಿದ್ದರೂ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 6.22 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ.

ಈ ಏರಿಕೆಯಿಂದಾಗಿ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟಾರೆ ಬಂಡವಾಳ ಮೌಲ್ಯವು ₹ 274.10 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 170 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 114 ಅಂಶಗಳಷ್ಟು ಇಳಿಕೆ ಆಗಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ ಹಾಗೂ ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಹೆಚ್ಚಳದಂತಹ ಬೆಳವಳಿಗೆಗಳು ವಹಿವಾಟಿನ ಮೇಲೆ ಪರಿಣಾಮ ಉಂಟುಮಾಡಿವೆ.

ಹಣದುಬ್ಬರ ಮತ್ತು ಕಚ್ಚಾ ತೈಲ ದರ ಏರಿಕೆ ನಿಯಂತ್ರಿಸಲು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಅತ್ಯಂತ ತ್ವರಿತಗತಿಯಲ್ಲಿ ಬಡ್ಡಿದರ ಏರಿಕೆ ಮಾಡುವುದಾಗಿ ಫೆಡರಲ್‌ ರಿಸರ್ವ್‌ ಸೂಚನೆ ನೀಡಿದೆ. ಹೀಗಾದಲ್ಲಿ, ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಒಳಹರಿವು ಇನ್ನಷ್ಟು ಕಡಿಮೆ ಆಗಲಿದೆ. 2021–22ನೇ ಹಣಕಾಸು ವರ್ಷದಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗಳಿಂದ ದಾಖಲೆಯ ₹ 1.4 ಲಕ್ಷ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆದಾರರು ಇಷ್ಟು ದೊಡ್ಡ ಮೊತ್ತವನ್ನು ಒಂದೇ ವರ್ಷದಲ್ಲಿ ಹಿಂದಕ್ಕೆ ಪಡೆದಿರುವುದು ಇದೇ ಮೊದಲು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಯಿಂದಬಂಡವಾಳ ಹಿಂತೆಗೆತಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ವಾರದ ವಹಿವಾಟಿನಲ್ಲಿ ₹ 7,290 ಕೋಟಿಗೂ ಹೆಚ್ಚಿನ ಮೊತ್ತವನ್ನು ಹಿಂದಕ್ಕೆ ಪಡೆದಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ವಾರದ ವಹಿವಾಟಿನಲ್ಲಿ 19 ಪೈಸೆಗಳಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.