ADVERTISEMENT

‘ಎಲ್‌ಪಿಜಿ ವಿತರಕರ ಆಯ್ಕೆ ವಂಚನೆಗೆ ಬಲಿಯಾಗಬೇಡಿ’

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಮನವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 18:53 IST
Last Updated 19 ಜೂನ್ 2019, 18:53 IST

ಬೆಂಗಳೂರು: ಅಡುಗೆ ಅನಿಲ (ಎಲ್‌ಪಿಜಿ) ಮತ್ತು ಚಿಲ್ಲರೆ ಮಳಿಗೆಯ ವಿತರಣೆ ಕೊಡಿಸುವುದಾಗಿ ನಂಬಿಸಿ ವಂಚಿಸುವ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸೂಚಿಸಿವೆ.

ಇಂಧನಗಳ ವಿತರಣೆ ಏಜೆನ್ಸಿ ಕೊಡಿಸಲು ಹಣಕ್ಕೆ ಬೇಡಿಕೆ ಇಡುತ್ತಿರುವುದು, ಜನರನ್ನು ಸುಲಭವಾಗಿ ನಂಬಿಸಿ ಮೋಸ ಮಾಡಲು ತೈಲ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ಗಳ ಅಂತರ್ಜಾಲ ತಾಣಗಳ ನಕಲಿ ವಿನ್ಯಾಸ ರೂಪಿಸಿರುವುದು ಗಮನಕ್ಕೆ ಬಂದಿದೆ. ಇಂತಹ ವಂಚಕರ ಮಾತಿಗೆ ಮರುಳಾಗಬಾರದು. ನಕಲಿ ಇ–ಮೇಲ್‌, ಅಧಿಕೃತ ಲಾಂಛನ ಬಳಸಿದ ಲೆಟರ್‌ಹೆಡ್‌ ಬಳಸಿ ಹಣ ಪಡೆದು ವಂಚಿಸುವ ಪ್ರಕರಣಗಳಿಗೆ ಸುಲಭವಾಗಿ ಮೋಸ ಹೋಗಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ.

ವಂಚಕರಿಗೆ ವ್ಯಕ್ತಿಗತ ಮಾಹಿತಿ ನೀಡುವ ಅಥವಾ ಹಣ ಪಾವತಿಸುವ ಮೊದಲು ತೈಲ ಕಂಪನಿಗಳ ಅಧಿಕೃತ ಕಚೇರಿಗೆ ಭೇಟಿ ನೀಡಬೇಕು. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ, ಸೈಬರ್ ಅಪರಾಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸುವಂತೆ ಕೋರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.