ADVERTISEMENT

ಭಾರತದಲ್ಲಿ ಐಫೋನ್‌ ತಯಾರಿಕೆ ನಿರ್ವಿಘ್ನ: ಮೂಲಗಳು

ಸ್ವದೇಶಕ್ಕೆ ವಾಪಸ್ಸಾದ ಚೀನಾ ತಂತ್ರಜ್ಞರು, ಅಂದುಕೊಂಡ ಪ್ರಕಾರವೇ ಐಫೋನ್‌ ಉತ್ಪಾದನೆ

ಪಿಟಿಐ
Published 8 ಜುಲೈ 2025, 15:42 IST
Last Updated 8 ಜುಲೈ 2025, 15:42 IST
ಆ್ಯಪಲ್‌ ಕಂಪನಿಯ ಐಫೋನ್‌ಗಳು –ಎಪಿ ಚಿತ್ರ
ಆ್ಯಪಲ್‌ ಕಂಪನಿಯ ಐಫೋನ್‌ಗಳು –ಎಪಿ ಚಿತ್ರ   

ನವದೆಹಲಿ: ಆ್ಯಪಲ್‌ ಕಂಪನಿಗೆ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿ ಕೊಡುವ ಘಟಕದಿಂದ ಚೀನಾದ ತಂತ್ರಜ್ಞರು ವಾಪಸ್ಸಾಗಿರುವುದು, ‘ಐಫೋನ್ 17’ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ಹೇಳಿವೆ.

ಭಾರತದಲ್ಲಿ ತಯಾರಿಕೆ ಹೆಚ್ಚು ಮಾಡುವ ಆ್ಯಪಲ್‌ ಕಂಪನಿಯ ಯೋಜನೆಯು ಅಂದುಕೊಂಡ ರೀತಿಯಲ್ಲೇ ಮುನ್ನಡೆಯುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಐಫೋನ್‌ಗಳ ತಯಾರಿಕೆಯಲ್ಲಿ ಬಹಳ ಅಗತ್ಯವಾಗಿರುವ ಕೆಲವು ಬಂಡವಾಳ ಸರಕುಗಳನ್ನು ಚೀನಾದಿಂದ ತರಿಸಿಕೊಳ್ಳುವುದು ಸುಲಭವಾಗುತ್ತಿದೆ ಎಂದು ಆ್ಯಪಲ್‌ ಉತ್ಪನ್ನಗಳನ್ನು ಭಾರತದಲ್ಲಿ ತಯಾರು ಮಾಡುವ ಫಾಕ್ಸ್‌ಕಾನ್‌ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ ಹೇಳಿರುವುದಾಗಿ ಮೂಲಗಳು ವಿವರಿಸಿವೆ.

ADVERTISEMENT

‘ಚೀನಾದ ತಂತ್ರಜ್ಞರು ಸ್ವದೇಶಕ್ಕೆ ಮರಳಿರುವುದು ಐಫೋನ್‌ ಉತ್ಪಾದನೆಯ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಿಲ್ಲ. ಐಫೋನ್‌ 17 ಭಾರತದಲ್ಲಿ ಅಂದುಕೊಂಡ ವೇಳಾಪಟ್ಟಿಯ ಪ್ರಕಾರವೇ ತಯಾರಾಗಲಿದೆ’ ಎಂದು ಬಲ್ಲಮೂಲಗಳು ಹೇಳಿವೆ.

ಈ ವಿಚಾರವಾಗಿ ಆ್ಯಪಲ್‌, ಫಾಕ್ಸ್‌ಕಾನ್‌ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಫಾಕ್ಸ್‌ಕಾನ್‌ ಇಂಡಿಯಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ತಂತ್ರಜ್ಞರಲ್ಲಿ ಹಲವರು ಕಳೆದ ಎರಡು ತಿಂಗಳಲ್ಲಿ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ. ಈ ತಂತ್ರಜ್ಞರು ಐಫೋನ್‌ ಉತ್ಪಾದನೆಯ ವಿವಿಧ ಪ್ರಕ್ರಿಯೆಗಳಲ್ಲಿ ಭಾಗಿಯಾಗುತ್ತಿದ್ದರು.

ಐಫೋನ್‌ ತಯಾರಿಕೆಗೆ ಚೀನಾದಿಂದ ಬಂಡವಾಳ ಸರಕುಗಳ ಪೂರೈಕೆ ಕೂಡ ಉತ್ತಮಗೊಂಡಿದೆ ಎಂದು ಮೂಲವೊಂದು ತಿಳಿಸಿದೆ. ‘ಬಂಡವಾಳ ಸರಕು ಪೂರೈಕೆ ಉತ್ತಮಗೊಂಡಿರುವ ಕಾರಣದಿಂದಾಗಿ ಭಾರತದಲ್ಲಿ ಐಫೋನ್‌ ತಯಾರಿಕೆಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಮೂಲವು ಹೇಳಿದೆ.

ಆ್ಯಪಲ್‌ ಕಂಪನಿಯು 2024–25ನೆಯ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಗರಿಷ್ಠ 4 ಕೋಟಿ ಐಫೋನ್‌ಗಳನ್ನು ತಯಾರಿಸಿತ್ತು. ಈ ವರ್ಷ ತಯಾರಿಕೆಯನ್ನು 6 ಕೋಟಿಗೆ ಹೆಚ್ಚಿಸುವ ಉದ್ದೇಶವು ಕಂಪನಿಗೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ್ಯಪಲ್‌ನ ವಿವಿಧ ಉತ್ಪನ್ನಗಳ ತಯಾರಿಕೆಯ ಪ್ರಕ್ರಿಯೆಯು ಭಾರತದಲ್ಲಿ 2 ಲಕ್ಷ ಮಂದಿಗೆ ಉದ್ಯೋಗ ನೀಡಿದೆ ಎಂಬ ಅಂದಾಜು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.