ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಜಾಗತಿಕ ಆರ್ಥಿಕ ಅನಿಶ್ಚಿತತೆಗಳನ್ನು ಹೆಚ್ಚಿಸಿದೆ, ಇದರಿಂದಾಗಿ ಭಾರತದಿಂದ ಆಗುವ ರಫ್ತಿನ ಮೇಲೆಯೂ ಪರಿಣಾಮ ಉಂಟಾಗುವ ಭೀತಿ ವ್ಯಕ್ತವಾಗಿದೆ. ಸಂಘರ್ಷದ ಪರಿಣಾಮವಾಗಿ ಸರಕು ಸಾಗಣೆ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ.
ಭಾರತದಿಂದ ಯುರೋಪಿಗೆ ಮತ್ತು ರಷ್ಯಾಕ್ಕೆ ಆಗುವ ರಫ್ತಿನ ಮೇಲೆ ಈ ಸಮರವು ಪರಿಣಾಮ ಬೀರಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧವು ದೀರ್ಘಾವಧಿಗೆ ನಡೆದರೆ ಇರಾನ್ ಮತ್ತು ಯುಎಇ ನಡುವೆ ಇರುವ ಹೊರ್ಮುಜ್ ಜಲಸಂಧಿ ಹಾಗೂ ಕೆಂಪು ಸಮುದ್ರದ ಮೂಲಕ ನಡೆಯುವ ವ್ಯಾಪಾರಕ್ಕೆ ಆಗಲಿದೆ.
‘ಸಮರವು ಜಾಗತಿಕ ವ್ಯಾಪಾರದ ಮೇಲೆ ಇನ್ನಷ್ಟು ಪೆಟ್ಟು ನೀಡಲಿದೆ. ಪರಿಸ್ಥಿತಿಯು ನಿಧಾನವಾಗಿ ಸುಧಾರಣೆ ಕಾಣುತ್ತಿತ್ತು. ಆದರೆ ಈಗ ಮತ್ತೆ ಸಮಸ್ಯೆ ಎದುರಾಗಲಿದೆ. ಸರಕು ಸಾಗಣೆ ವೆಚ್ಚ ಮತ್ತು ವಿಮಾ ವೆಚ್ಚವು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಭಾರತೀಯ ರಫ್ತುದಾರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದರು.
ಕೆಂಪು ಸಮುದ್ರದ ಮಾರ್ಗವು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿತ್ತು. ಆದರೆ ಈಗ ಸಮರದ ಕಾರಣದಿಂದಾಗಿ ಸಾಗಣೆ ವೆಚ್ಚವು ಹೆಚ್ಚಲಿದೆ ಎಂದು ಮುಂಬೈ ಮೂಲದ ರಫ್ತುದಾರ ಎಸ್.ಕೆ. ಸರಾಫ್ ತಿಳಿಸಿದರು. ಯುದ್ಧವು ಒಂದು ವಾರ ಮುಂದುವರಿದರೆ ಜಾಗತಿಕ ವ್ಯಾಪಾರಕ್ಕೆ ಧಕ್ಕೆ ಆಗುತ್ತದೆ ಎಂದರು.
ಸರಕು ಸಾಗಣೆ ಹಡಗುಗಳು ಕೆಂಪು ಸಮುದ್ರ ಮಾರ್ಗವನ್ನು ಮತ್ತೆ ಬಳಸಲು ಆರಂಭಿಸಿದ್ದವು. ಇದರಿಂದಾಗಿ ಭಾರತ ಹಾಗೂ ಏಷ್ಯಾದ ಇತರ ಕಡೆಗಳಿಂದ ಯುರೋಪ್ ಮತ್ತು ಅಮೆರಿಕಕ್ಕೆ ತೆರಳುವಾಗ 15–20 ದಿನಗಳು ಉಳಿಯುತ್ತಿದ್ದವು.
‘ಇನ್ನು ಈ ಹಡಗುಗಳು ಕೆಂಪು ಸಮುದ್ರ ಮಾರ್ಗದಿಂದ ಮತ್ತೆ ದೂರ ಉಳಿಯಲಿವೆ. ಸಾಗಣೆ ವೆಚ್ಚದಲ್ಲಿನ ಹೆಚ್ಚಳವನ್ನು ವರ್ತಕರು ಹೊರಬೇಕಾಗುತ್ತದೆ. ವಾರಕ್ಕೂ ಹೆಚ್ಚಿನ ಅವಧಿಗೆ ಯುದ್ಧ ಮುಂದುವರಿದರೆ ಸಾಗಣೆ ವೆಚ್ಚವು ಶೇಕಡ 50ರಷ್ಟು ಹೆಚ್ಚಾಗುತ್ತದೆ’ ಎಂದು ಸರಾಫ್ ತಿಳಿಸಿದರು.
ಕೆಂಪು ಸಮುದ್ರದ ಮಾರ್ಗದಲ್ಲಿ ಸಾಗುವ ಹಡಗುಗಳ ಮೇಲೆ ಹೂಥಿ ಬಂಡುಕೋರರು ದಾಳಿ ನಡೆಸುತ್ತಿದ್ದರಿಂದ ಈ ಮಾರ್ಗವನ್ನು ವರ್ತಕರು ಬಳಸುತ್ತಿರಲಿಲ್ಲ. ಆದರೆ ಅಮೆರಿಕವು ಮಧ್ಯಪ್ರವೇಶಿಸಿ, ಹೂಥಿ ಬಂಡುಕೋರರ ಮೇಲೆ ದಾಳಿ ನಡೆಸಿದ ನಂತರ ವಾಣಿಜ್ಯ ಉದ್ದೇಶದ ಹಡಗುಗಳ ಮೇಲಿನ ದಾಳಿಗಳು ನಿಂತಿದ್ದವು.
ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗುವ ಪೆಟ್ರೋಲಿಯಂ ತೈಲದಲ್ಲಿ ಶೇಕಡ 21ರಷ್ಟು ಭಾಗವು ಹೊರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಆಗುತ್ತದೆ. ಈ ಜಲಸಂಧಿಯ ಮೂಲಕ ಸಾಗಣೆ ಆಗುವ ಕಚ್ಚಾ ತೈಲಕ್ಕೆ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ ಪ್ರಮುಖ ಗ್ರಾಹಕ ದೇಶಗಳು. ಈ ಜಲಸಂಧಿಯನ್ನು ತಪ್ಪಿಸಿ ತೈಲವನ್ನು ಪೂರೈಸುವ ಕೊಳವೆ ಮಾರ್ಗವನ್ನು ಸೌದಿ ಅರೇಬಿಯಾ ಮತ್ತು ಯುಎಇ ಮಾತ್ರವೇ ಹೊಂದಿವೆ.
ಭಾರತವು ಯುರೋಪಿನ ಜೊತೆ ಸರಕುಗಳ ವಹಿವಾಟಿನಲ್ಲಿ ಶೇಕಡ 80ರಷ್ಟು ಪಾಲು ಕೆಂಪು ಸಮುದ್ರದ ಮೂಲಕ ಆಗುತ್ತದೆ. ಅಮೆರಿಕದ ಜೊತೆಗಿನ ಸರಕು ವಹಿವಾಟಿನಲ್ಲಿ ಬಹಳಷ್ಟು ಪಾಲು ಈ ಮಾರ್ಗದ ಮೂಲಕ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.