ADVERTISEMENT

ಕೃಷಿ ವಹಿವಾಟು ವೃದ್ಧಿಗೆ ‘ಐಟಿಸಿ ಮಾರ್ಸ್‌’ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 12:24 IST
Last Updated 21 ಜುಲೈ 2022, 12:24 IST
ಸಂಜೀವ್‌ ಪುರಿ
ಸಂಜೀವ್‌ ಪುರಿ   

ಬೆಂಗಳೂರು: ಐಟಿಸಿ ಮಾರ್ಸ್‌ (ITC MAARS) ಆ್ಯಪ್‌ ಮೂಲಕ ಕೃಷಿ ವಹಿವಾಟು ಹೆಚ್ಚಿಸಿಕೊಳ್ಳಲು ಐಟಿಸಿ ಲಿಮಿಟೆಡ್‌ ಮುಂದಾಗಿದೆ.

ಗುರುವಾರ ವರ್ಚುವಲ್‌ ಆಗಿ ಸುದ್ದಿಗೋಷ್ಠಿ ನಡೆಸಿದ ಕಂಪನಿಯ ಸಿಎಂಡಿ ಸಂಜೀವ್‌ ಪುರಿ, ‘ಉತ್ತಮ ಗುಣಮಟ್ಟ ಮತ್ತು ಯೋಗ್ಯವಾದ ದರದಲ್ಲಿ ಕೃಷಿಗೆ ಬೇಕಾದ ಉತ್ಪನ್ನಗಳು ಸಿಗುವಂತೆ ಮಾಡಿ, ಕೃಷಿ ಸಲಕರಣೆಗಳು, ಮಾರುಕಟ್ಟೆ ಲಭ್ಯತೆಯ ಜೊತೆಗೆ ಹಣಕಾಸಿನ ನೆರವು ಕಲ್ಪಿಸಿಕೊಡುವ ಮೂಲಕ ಈ ಸೂಪರ್ ಆ್ಯಪ್‌ ರೈತರನ್ನು ಇನ್ನಷ್ಟು ಬಲಪಡಿಸಲಿದೆ’ ಎಂದರು.

‘ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆ್ಯಪ್ ಸೇವೆ ಇರಲಿದೆ. ಬೆಳೆಗೆ ರೋಗ ತಗುಲಿದ್ದರೆ ಆ್ಯಪ್‌ ಮೂಲಕ ಅದರ ಚಿತ್ರವನ್ನು ತೆಗೆದು ಪೋಸ್ಟ್‌ ಮಾಡಿದರೆ, ಅದು ಯಾವ ರೋಗ, ಅದಕ್ಕೆ ಕಾರಣ ಮತ್ತು ಪರಿಹಾರ ಹೇಗೆ ಎನ್ನುವುದನ್ನು ತಜ್ಞರು ತಿಳಿಸಿಕೊಡಲಿದ್ದಾರೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಆದಾಯ ಹೆಚ್ಚಿಸಿಕೊಳ್ಳುವ ಬಗ್ಗೆ ಮಾಹಿತಿ ಸಿಗಲಿದೆ. ಈ ಆ್ಯಪ್ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಎಫ್‌ಪಿಒಗಳಿಗೆ ಅಥವಾ ಐಟಿಸಿಯಂತಹ ಕಂಪನಿಗಳಿಗೆ ಮಾರಾಟ ಮಾಡಬಹುದು’ ಎಂದರು.

ADVERTISEMENT

‘ಮೊದಲ ಹಂತದಲ್ಲಿ ಏಳು ರಾಜ್ಯಗಳಲ್ಲಿ ಈ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 200 ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಮತ್ತು 40 ಸಾವಿರ ರೈತರು ಇದ್ದಾರೆ. 4 ಸಾವಿರ ಎಫ್‌ಪಿಒ ಮತ್ತು 1 ಕೋಟಿ ರೈತರನ್ನು ತಲುಪುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಕಂಪನಿಯ ವಹಿವಾಟು ವಿಸ್ತರಿಸಿಕೊಳ್ಳುವ ಭಾಗವಾಗಿ ಮೈಸೂರಿನಲ್ಲಿ ನಿಕೊಟಿನ್‌ ತಯಾರಿಕಾ ಘಟಕ, ಗುಜರಾತ್‌ನಲ್ಲಿ ಪ್ಯಾಕೇಜಿಂಗ್‌ ಘಟಕ ಹಾಗೂ ಪಶ್ಚಿಮ ಬಂಗಾಳದಲ್ಲಿ ವೈಯಕ್ತಿಕ ಕಾಳಜಿ ಉತ್ಪನ್ನಗಳ ತಯಾರಿಕೆ ಘಟಕದ ನಿರ್ಮಾಣ ಕಾರ್ಯವು ಈ ವರ್ಷಾಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.