
ನವದೆಹಲಿ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭದಲ್ಲಿ ಶೇ 2.6ರಷ್ಟು ಹೆಚ್ಚಳವಾಗಿದ್ದು, ಕಂಪನಿಯು ₹5,186 ಕೋಟಿ ಲಾಭ ಗಳಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹5,054 ಕೋಟಿ ಲಾಭ ಆಗಿತ್ತು ಎಂದು ಕಂಪನಿ ಷೇರುಪೇಟೆಗೆ ಗುರುವಾರ ತಿಳಿಸಿದೆ.
ಉತ್ಪನ್ನಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಇದರಿಂದ ವರಮಾನದಲ್ಲಿ ಇಳಿಕೆ ಆಗಿದ್ದು, ₹21,047 ಕೋಟಿಯಷ್ಟಾಗಿದೆ. ಇದು ಕಳೆದ ಸೆಪ್ಟೆಂಬರ್‌ನಲ್ಲಿ ₹21,387 ಕೋಟಿಯಷ್ಟಾಗಿತ್ತು. ವೆಚ್ಚವು ₹15,415 ಕೋಟಿಯಿಂದ ₹15,016 ಕೋಟಿಗೆ ಇಳಿದಿದೆ ಎಂದು ತಿಳಿಸಿದೆ.
ಐಟಿಸಿಯ ಎಫ್‌ಎಂಸಿಜಿ ವಹಿವಾಟು ಶೇ 7ರಷ್ಟು ಬೆಳವಣಿಗೆ ಆಗಿದ್ದು, ₹5,473 ಕೋಟಿ ವರಮಾನ ಗಳಿಸಿದೆ. ಎಫ್‌ಎಂಸಿಜಿ ಹೊರತುಪಡಿಸಿದ ವಹಿವಾಟು ಶೇ 8.4ರಷ್ಟು ಪ್ರಗತಿ ಕಂಡಿದ್ದು, ₹6,059 ಕೋಟಿ ಗಳಿಸಿದೆ. ಕೃಷಿ ಸಂಬಂಧಿ ವಹಿವಾಟುಗಳು ಶೇ 31ರಷ್ಟು ಇಳಿಕೆ ಕಂಡಿದ್ದು, ₹4,037 ಕೋಟಿಯಾಗಿದೆ. ಪೇಪರ್ ಬೋರ್ಡ್, ಕಾಗದ ಮತ್ತು ಪ್ಯಾಕೇಜಿಂಗ್‌ನಿಂದ ವರಮಾನವು ₹2,220 ಕೋಟಿಯಾಗಿದ್ದು, ಕಳೆದ ಸೆಪ್ಟೆಂಬರ್‌ಗೆ ಹೋಲಿಸಿದರೆ ಶೇ 5ರಷ್ಟು ಹೆಚ್ಚಳ ಎಂದು ತಿಳಿಸಿದೆ.
ಕಂಪನಿಯು 2026ರ ಜನವರಿ 1ರಿಂದ ಜಾರಿಗೆ ಬರುವಂತೆ ಐದು ವರ್ಷದ ಅವಧಿಗೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರನ್ನು ಕಂಪನಿಯ ಸ್ವತಂತ್ರ ನಿರ್ದೇಶಕ ಸ್ಥಾನಕ್ಕೆ ನೇಮಕಾತಿಗೆ ಅನುಮೋದನೆ ನೀಡಲು ಶಿಫಾರಸು ಮಾಡಿದೆ.