ADVERTISEMENT

ಜೆಟ್‌ ಮಾರಾಟಕ್ಕೆ ಮತ್ತೆ ಹಿನ್ನಡೆ

ಖರೀದಿಯಿಂದ ಹಿಂದೆ ಸರಿದ ಎತಿಹಾದ್ ಏರ್‌ವೇಸ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:00 IST
Last Updated 12 ಆಗಸ್ಟ್ 2019, 20:00 IST
   

ನವದೆಹಲಿ: ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಮಾರಾಟ ಮಾಡುವ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಖರೀದಿ ಆಸಕ್ತಿ ತಿಳಿಸಲು ನೀಡಿದ್ದ ಗಡುವು ಇದೇ 10ಕ್ಕೆ ಮುಗಿದಿದ್ದು, ಒಟ್ಟಾರೆ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಅದರಲ್ಲಿ ಗಣಿ ಉದ್ಯಮಿ ಅನಿಲ್‌ ಅಗರ್‌ವಾಲ್‌ ಅವರು ಹೂಡಿಕೆ ಮಾಡಿರುವ ವೋಲ್ಕನ್‌ ಇನ್‌ವೆಸ್ಟ್‌ಮೆಂಟ್‌ ಕಂಪನಿಯು ಭಾನುವಾರ ಅರ್ಜಿ ಸಲ್ಲಿಸಿತ್ತು. ಆದರೆ, ಜೆಟ್ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತಮಗೆ ಇಲ್ಲ ಎಂದು ಅನಿಲ್‌ ಅಗರ್‌ವಾಲ್‌ ಸೋಮವಾರ ತಿಳಿಸಿದ್ದಾರೆ.

ADVERTISEMENT

‘ಜೆಟ್‌ನ ವಹಿವಾಟನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿತ್ತು. ಒಟ್ಟಾರೆ ಮೌಲ್ಯದ ಪರಿಶೀಲನೆ ಮತ್ತು ಇತರೆ ಆಸ್ತಿಗಳು ಪರಿಗಣಿಸಿದ ಬಳಿಕ ಖರೀದಿ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ’ ಎಂದೂ ಹೇಳಿದ್ದಾರೆ.

ಹಿಂದೆ ಸರಿದ ಎತಿಹಾದ್: ಜೆಟ್‌ ಏರ್‌ವೇಸ್‌ನಲ್ಲಿ ಮತ್ತೆ ಹೂಡಿಕೆ ಮಾಡದೇ ಇರಲು ನಿರ್ಧರಿಸಲಾಗಿದೆ ಎಂದು ಅಬುಧಾಬಿಯ ಎತಿಹಾದ್‌ ಏರ್‌ವೇಸ್‌ ತಿಳಿಸಿದೆ.

ಎತಿಹಾದ್, ಈಗಾಗಲೇ ಜೆಟ್‌ ಏರ್‌ವೇಸ್‌ನಲ್ಲಿ ಶೇ 24ರಷ್ಟು ಪಾಲು ಬಂಡವಾಳ ಹೊಂದಿದೆ.

ಏಪ್ರಿಲ್‌ 17ರಂದು ಹಾರಾಟವನ್ನು ನಿಲ್ಲಿಸಿರುವ ಸಂಸ್ಥೆಯು ಸದ್ಯಕ್ಕೆ, ದಿವಾಳಿ ಪ್ರಕ್ರಿಯೆಗೆ ಒಳಗಾಗಿದ್ದು, ಕನಿಷ್ಠ ಮೂರು ಸಂಸ್ಥೆಗಳು ಖರೀದಿಸುವ ಆಸಕ್ತಿ ತೋರಿ ಅರ್ಜಿ ಸಲ್ಲಿಸಿವೆ.

ಸಂಸ್ಥೆಯ ಸಾಲದ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ಅದನ್ನು ಖರೀದಿಸುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಅಥವಾ ಈ ಸಂದರ್ಭ
ದಲ್ಲಿ ಮರುಹೂಡಿಕೆ ಮಾಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಈ ಕಾರಣಕ್ಕೆ ಖರೀದಿ ಆಸಕ್ತಿ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಶನಿವಾರ ಅಂತಿಮ ದಿನವಾಗಿತ್ತು. ಈ ನಿರ್ಧಾರದಿಂದ ಭಾರತದಲ್ಲಿನ ನಮ್ಮ ಸೇವಾ ಬದ್ಧತೆಯ ಮೇಲೆ ಯಾವುದೇ ಪರಿಣಾಮ ಉಂಟಾ
ಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಒಕ್ಕೂಟದ ಬೇಡಿಕೆ: ಮಧ್ಯಂತರ ಹಣಕಾಸು ನೆರವಿನ ರೂಪದಲ್ಲಿ ಒಂದು ತಿಂಗಳ ವೇತನ ನೀಡುವಂತೆ ಸಾಲದಾತರ ಸಮಿತಿಗೆ ಸಂಸ್ಥೆಯ ಸಿಬ್ಬಂದಿ ಒಕ್ಕೂಟವು ಬೇಡಿಕೆ ಸಲ್ಲಿಸಿದೆ.

‘ದಿವಾಳಿ ಪ್ರಕ್ರಿಯೆ ತ್ವರಿತಗೊಳಿಸ
ಬೇಕು ಮತ್ತು ಆದಷ್ಟೂ ಬೇಗನೆ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಬೇಕು. ನಗದು ಕೊರತೆ ಎದುರಾಗಬಾರದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.