ADVERTISEMENT

ಜೆಟ್‌: ದಿವಾಳಿ ಪ್ರಕ್ರಿಯೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಜೆಟ್‌ ಏರ್‌ವೇಸ್‌
ಜೆಟ್‌ ಏರ್‌ವೇಸ್‌   

ನವದೆಹಲಿ (ಪಿಟಿಐ): ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

2016ರ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಕಾಯ್ದೆಯ ಪ್ರಕಾರ, ಜೆಟ್‌ ಏರ್‌ವೇಸ್‌ ವಿರುದ್ಧಕಾರ್ಪೊರೇಟ್‌ ದಿವಾಳಿ ಗೊತ್ತುವಳಿ ಪ್ರಕ್ರಿಯೆಗೆ (ಸಿಐಆರ್‌ಪಿ) ಸೂಚನೆ ನೀಡಲಾಗಿದೆ ಎಂದು ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರದ (ಎನ್‌ಸಿಎಲ್‌ಟಿ) ಆದೇಶದಲ್ಲಿ ತಿಳಿಸಲಾಗಿದೆ’ ಎಂದು ಜೆಟ್‌ ಏರ್‌ವೇಸ್‌ ಸಂಸ್ಥೆಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಪ್ರಕ್ರಿಯೆ ಆರಂಭ ಆಗಿರುವುದರಿಂದ ಸಂಸ್ಥೆಯಲ್ಲಿನ ಆಡಳಿತ ಮಂಡಳಿ ನಿರ್ದೇಶಕರ ಅಧಿಕಾರ ಅಮಾನತುಗೊಂಡಿದ್ದು, ಮಧ್ಯಂತರ ಗೊತ್ತುವಳಿ ವೃತ್ತಿಪರರ ಮೂಲಕ ಅಧಿಕಾರ ನಿರ್ವಹಿಸಬೇಕಾಗಿದೆ ಎಂದೂ ಹೇಳಿದೆ.

ADVERTISEMENT

ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ 90 ದಿನಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎನ್‌ಸಿಎಲ್‌ಟಿ ಸೂಚನೆ ನೀಡಿದೆ. 15 ದಿನಗಳಿಗೊಮ್ಮೆ ಪ್ರಗತಿ ವರದಿ ತಿಳಿಸುವಂತೆ ಹೇಳಿದೆ. ಜುಲೈ 5ರಂದು ಮತ್ತೊಮ್ಮೆ ವಿಚಾರಣೆ ನಡೆಸಲಿದ್ದು, ಆ ಸಂದರ್ಭದಲ್ಲಿಯೇ ಮೊದಲ ವರದಿಯನ್ನು ನೀಡುವಂತೆ ಆದೇಶಿಸಿದೆ.

ದಿವಾಳಿ ಪ್ರಕ್ರಿಯೆಗೆ ಒಳಪಟ್ಟ ಮೊದಲ ದೇಶಿ ವಿಮಾನಯಾನ ಸಂಸ್ಥೆ ಇದಾಗಿದೆ. ₹ 8 ಸಾವಿರ ಕೋಟಿ ಸಾಲ ವಸೂಲಿಗಾಗಿ,ಕಳೆದ ಐದು ತಿಂಗಳಿನಿಂದ ಸಂಸ್ಥೆಯನ್ನು ಮಾರಾಟ ಮಾಡಲು ಬ್ಯಾಂಕ್‌ಗಳ ಒಕ್ಕೂಟ ಪ್ರಯತ್ನ ನಡೆಸಿತ್ತಾದರೂ ಹಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ.

25 ವರ್ಷಗಳ ಹಿಂದೆ ಆರಂಭ ಗೊಂಡಿದ್ದ ಜೆಟ್‌ ಏರ್‌ವೇಸ್‌, ಒಂದೊಮ್ಮೆ ದೇಶದ ಅತಿದೊಡ್ಡ ಖಾಸಗಿ ವಿಮಾನ ಯಾನ ಸಂಸ್ಥೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.