ಜಿಯೊ
ನವದೆಹಲಿ: 2026ರ ಮೊದಲ ಭಾಗದಲ್ಲಿ ರಿಲಯನ್ಸ್ ಜಿಯೊದ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆ (ಐಪಿಒ) ಆರಂಭಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
ಐಪಿಒಗೆ ಅರ್ಜಿ ಸಲ್ಲಿಸಲು ಎಲ್ಲ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ. ಮುಂದಿನ ವರ್ಷದ ಮೊದಲ ಭಾಗದಲ್ಲಿ ಐಪಿಒ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಪ್ರಸ್ತುತ ಜಿಯೊ ಬಳಕೆದಾರರ ಸಂಖ್ಯೆ 50 ಕೋಟಿ ದಾಟಿದೆ ಎಂದಿದ್ದಾರೆ.
ಜಿಯೊದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ 66.3ರಷ್ಟು ಪಾಲು ಹೊಂದಿದೆ. ಮೆಟಾ ಶೇ 10 ಮತ್ತು ಗೂಗಲ್ ಶೇ 7.7ರಷ್ಟು ಪಾಲನ್ನು ಹೊಂದಿವೆ. ಉಳಿದ ಶೇ 16ರಷ್ಟನ್ನು ಈಕ್ವಿಟಿ ಹೂಡಿಕೆದಾರರು ಹೊಂದಿದ್ದಾರೆ.
ಅಂಬಾನಿ ಅವರು ಷೇರುಗಳ ಮಾರಾಟದ ಪ್ರಮಾಣವನ್ನು ಬಹಿರಂಗಪಡಿಸಿಲ್ಲ. ಆದರೂ, ಈ ಐಪಿಒ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಸಾರ್ವಜನಿಕ ಷೇರು ಮಾರಾಟ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಮೆಟಾ, ಗೂಗಲ್ ಜೊತೆ ಪಾಲುದಾರಿಕೆ: ವ್ಯಾಪಾರ ಸಂಸ್ಥೆಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸೇವೆ ಒದಗಿಸಲು ರಿಲಯನ್ಸ್ ಇಂಡಸ್ಟ್ರೀಸ್, ಮೆಟಾದೊಂದಿಗೆ ಜಂಟಿ ಪಾಲುದಾರಿಕೆ ಮಾಡಿಕೊಂಡಿದೆ.
ಆರಂಭಿಕವಾಗಿ ₹855 ಕೋಟಿ ಹೂಡಿಕೆ ಮಾಡಿದೆ. ಇದರಲ್ಲಿ ಶೇ 70ರಷ್ಟು ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಮಾಡಿದ್ದರೆ, ಶೇ 30ರಷ್ಟು ಮೆಟಾ ಕಂಪನಿಯದ್ದಾಗಿದೆ. ಎ.ಐ ದತ್ತಾಂಶ ಕೇಂದ್ರಗಳ ಸ್ಥಾಪನೆಗೆ ಗೂಗಲ್ ಜೊತೆಗೆ ರಿಲಯನ್ಸ್ ಪಾಲುದಾರಿಕೆ ಮಾಡಿಕೊಂಡಿದೆ. ಮೆಟಾದ ಲಾಮಾ ಮಾದರಿಯನ್ನು ಉದ್ಯಮಗಳಿಗೆ ನೀಡಲಿದೆ.
‘ಮೆಟಾ ಮತ್ತು ರಿಲಯನ್ಸ್ ಒಪ್ಪಂದದ ಮೂಲಕ ಸೃಷ್ಟಿಯಾಗಲಿರುವ ಎ.ಐ ಮಾದರಿಗಳು ಭಾರತದ ಉದ್ಯಮಗಳಿಗೆ ಸಹಾಯ ಮಾಡಲಿವೆ. ರಿಲಯನ್ಸ್ ಜೊತೆಗಿನ ಒಪ್ಪಂದದಿಂದ ಈ ಸೇವೆಯು ಭಾರತದ ಪ್ರತಿ ಮೂಲೆಗೂ ತಲುಪಲಿದೆ’ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.