ಮುಂಬೈ: ಜಿಯೊ ಫೈನಾನ್ಶಿಯಲ್ ಸರ್ವಿಸಸ್‌ನ ಮ್ಯೂಚುವಲ್ ಫಂಡ್ ಅಂಗಸಂಸ್ಥೆಯು ತನ್ನ ಮೊದಲ ಸಕ್ರಿಯ ನಿರ್ವಹಣೆಯ ಫಂಡ್ ಅನಾವರಣ ಮಾಡಿದೆ. ಅಲ್ಲದೆ, ಈ ಫಂಡ್‌ನ ವೆಚ್ಚಗಳು ಬಹಳ ಸ್ಪರ್ಧಾತ್ಮಕ ಆಗಿರಲಿವೆ ಎಂಬ ಮಾಹಿತಿ ನೀಡಿದೆ.
ಜಿಯೊ ಬ್ಲ್ಯಾಕ್‌ರಾಕ್ ಫ್ಲೆಕ್ಸಿ ಕ್ಯಾಪ್ ಫಂಡ್‌ನ ಎಕ್ಸ್‌ಪೆನ್ಸ್ ರೇಷ್ಯೊ (ವೆಚ್ಚಗಳು) ಶೇ 0.50ರಷ್ಟು ಇರಲಿದೆ ಎಂದು ಜಿಯೊ ಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ತಿಳಿಸಿದೆ. ಈ ವೆಚ್ಚವು ಈ ವಿಭಾಗದ ಫಂಡ್‌ಗಳಲ್ಲಿ ಬಹಳ ಕಡಿಮೆಯದ್ದಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಈ ಹಿಂದೆ ದೇಶದಲ್ಲಿ ಜಿಯೊ ಸೇವೆಗಳನ್ನು ಆರಂಭಿಸಿದಾಗ ಕಡಿಮೆ ಶುಲ್ಕ ನಿಗದಿ ಮಾಡಿ ತೀವ್ರ ಪೈಪೋಟಿ ಒಡ್ಡಿತ್ತು.
ಮುಂದಿನ ದಿನಗಳಲ್ಲಿ ಆರಂಭಿಸುವ ಇತರ ಹೂಡಿಕೆ ಉತ್ಪನ್ನಗಳಲ್ಲಿಯೂ ಇದೇ ಬಗೆಯಲ್ಲಿ ವೆಚ್ಚಗಳನ್ನು ನಿಗದಿಪಡಿಸುವ ಆಲೋಚನೆ ಇದೆ ಎಂಬ ಸೂಚನೆಯನ್ನು ಜಿಯೊ ಬ್ಲ್ಯಾಕ್‌ರಾಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿದ್ ಸ್ವಾಮಿನಾಥನ್ ನೀಡಿದ್ದಾರೆ.
ಅಷ್ಟೇ ಅಲ್ಲ, ಈ ಫಂಡ್‌ನಿಂದ ಒಂದು ವರ್ಷಕ್ಕೆ ಮೊದಲು ಹಣ ಹಿಂಪಡೆದರೆ ಶುಲ್ಕ ಪಾವತಿಸಬೇಕಾದ ಅಗತ್ಯ ಇಲ್ಲ ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಹೊಸ ಫಂಡ್‌ನಲ್ಲಿ ಆರಂಭಿಕ ಹೂಡಿಕೆಗೆ ಅಕ್ಟೋಬರ್ 7ರವರೆಗೆ ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.