ADVERTISEMENT

ಕೋವಿಡ್–19 ಆರ್ಥಿಕ ಬಿಕ್ಕಟ್ಟು | ಸ್ಥಳೀಯ ಸುದ್ದಿ ಸಂಸ್ಥೆಗಳ ನೆರವಿಗೆ ಗೂಗಲ್

ಏಜೆನ್ಸೀಸ್
Published 16 ಏಪ್ರಿಲ್ 2020, 10:38 IST
Last Updated 16 ಏಪ್ರಿಲ್ 2020, 10:38 IST
   

ಜಾಗತಿಕ ಪಿಡುಗು ಕೋವಿಡ್–19 ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಎದುರಿಸುತ್ತಿರುವ ಸ್ಥಳೀಯ ಸಂಸ್ಥೆಗಳಿಗೆ ‘ಗೂಗಲ್‌ ನ್ಯೂಸ್‌ ಇನಿಶಿಯೇಟಿವ್‌’ನ ಭಾಗವಾಗಿ ನೆರವು ನೀಡಲು ಗೂಗಲ್ ಸಂಸ್ಥೆ‌ ಮುಂದಾಗಿದೆ.

ತನ್ನಪತ್ರಿಕೋದ್ಯಮ ತುರ್ತು ಪರಿಹಾರ ನಿಧಿಯಿಂದ ನೆರವುನೀಡುವುದಾಗಿ ಹೇಳಿರುವ ಗೂಗಲ್‌, ನಿಧಿಯ ಒಟ್ಟು ಗಾತ್ರದ ಮಾಹಿತಿ ನೀಡಿಲ್ಲ. ಆದರೆ, ಸಂಸ್ಥೆಯ ಉಪಾಧ್ಯಕ್ಷ ರಿಚರ್ಡ್‌ ಗಿಂಗಾರ್ಸ್‌ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

‘ಪ್ರಪಂಚದಾದ್ಯಂತ ಸಾವಿರಾರು ಸಣ್ಣ, ಮಧ್ಯಮ ಪ್ರಮಾಣದ ಸ್ಥಳೀಯ ಸುದ್ದಿ ಪ್ರಕಾಶಕರಿಗೆ ನೆರವು ನೀಡುವುದು ನಮ್ಮ ಉದ್ದೇಶ. ಅದರಂತೆ, ಸಣ್ಣ ಪ್ರಮಾಣದ ಸುದ್ದಿ ಸಂಸ್ಥೆಗಳಿಗೆ ಕನಿಷ್ಠ ಸಾವಿರ ಡಾಲರ್‌, ದೊಡ್ಡ ಪ್ರಮಾಣದ ಸುದ್ದಿಸಂಸ್ಥೆಗಳಿಗೆ ಕನಿಷ್ಠ ಹತ್ತು ಸಾವಿರ ಡಾಲರ್‌ ನೆರವು ಲಭಿಸುತ್ತದೆ. ನೆರವಿನ ಹಣದ ಪ್ರಮಾಣವು ಪ್ರತಿ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಸ್ಥಳೀಯ ಸುದ್ದಿಗಳು ಸರಿಯಾದ ಸ‌ಮಯದಲ್ಲಿ ಜನರು ಮತ್ತು ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಇರುವ ಮುಖ್ಯ ಸಂಪನ್ಮೂಲಗಳಾಗಿವೆ. ಲಾಕ್‌ಡೌನ್ ಘೋಷಣೆ, ಉದ್ಯಾನ–ಶಾಲೆಗಳನ್ನು ಮುಚ್ಚುವುದರಿಂದ ಮತ್ತು ಕೋವಿಡ್‌–19ನಿಂದ ಸ್ಥಳೀಯವಾಗಿ ಆಗುತ್ತಿರುವ ಪರಿಣಾಮಗಳೇನು ಎಂಬ ಅಂಕಿ–ಅಂಶಗಳನ್ನು ವರದಿ ಮಾಡುವಲ್ಲಿ ಸ್ಥಳೀಯ ಸುದ್ದಿ ಮನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಕೋವಿಡ್‌–19ನಿಂದ ಉಂಟಾಗಿರುವ ಆರ್ಥಿಕ ಹಿಂಜರಿತವು ಉದ್ಯೋಗ ಕಡಿತ, ಕಚೇರಿ ಮುಚ್ಚುವುದು, ವೇತ ಕಡಿತಕ್ಕೆ ದಾರಿ ಮಾಡುಕೊಡುತ್ತದೆ’ ಎಂದಿದ್ದಾರೆ.

ಮಾತ್ರವಲ್ಲದೆ, ಪತ್ರಿಕೋದ್ಯಮ ಸಂಘಟನೆಗಳಾದ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಜರ್ನಲಿಸ್ಟ‌ ಮತ್ತು ಕೊಲಂಬಿಯಾ ಜರ್ನಲಿಸಂ ಸ್ಕೂಲ್‌ನ, ಡಾರ್ಟ್‌ ಫಾರ್‌ ಜರ್ನಲಿಸಂ ಮತ್ತು ಟ್ರೌಮಾಗೆ ಒಟ್ಟು ₹ 7.6 ಕೋಟಿ (1 ಮಿಲಿಯನ್ ಡಾಲರ್) ನೆರವು ನೀಡುವುದಾಗಿ ಗಿಂಗಾರ್ಸ್‌ ತಿಳಿಸಿದ್ದಾರೆ.

ಕೊರೊನಾವೈರಸ್‌ಗೆ ಸಂಬಂಧಿಸಿದಂತೆ ಸುಳ್ಳುಸುದ್ದಿ ಹರಡುವಿಕೆ ವಿರುದ್ಧ ಈಗಾಗಲೇ ಹೋರಾಟ ಆರಂಭಿಸಿರುವ ಗೂಗಲ್‌, ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ಸಲುವಾಗಿ ಫ್ಯಾಕ್ಟ್‌ಚೆಕ್‌ ಮಾಡುವವರನ್ನು ಬೆಂಬಲಿಸಲು ಮತ್ತು ತಪ್ಪಾದ ಮಾಹಿತಿಗೆ ಸಂಬಂಧಿಸಿದಂತೆ ಕೊರೊನಾ ವಿರುದ್ಧ ಲಾಭ ನಿರೀಕ್ಷಿಸದೆ ಹೋರಾಡುವವರಿಗೆ ಮತ್ತು ಸೋಂಕಿತರ ಬಗ್ಗೆ ನಿಖರ ಮಾಹಿತಿ ನೀಡುವ ಗೂಗಲ್‌ನ ‘ಕೋವಿಡ್‌–19 ಕೇಸ್‌ ಮ್ಯಾಪರ್‌’ನಂತ ಸಾಧನೆಗಳಿಗೆ ಗೂಗಲ್‌ ನ್ಯೂಸ್‌ ಇನಿಶಿಯೇಟಿವ್‌ ವತಿಯಿಂದ ₹ 50 ಕೋಟಿ ನೆರವು ನೀಡುವುದಾಗಿ ಘೋಷಿಸಿತ್ತು.

ನೆರವಿಗಾಗಿ ಅರ್ಜಿಸಲ್ಲಿಸಲು ಏಪ್ರಿಲ್‌ 29ರ ರಾತ್ರಿ 11.59ರ ವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ..ಪತ್ರಿಕೋದ್ಯಮ ತುರ್ತು ಪರಿಹಾರ ನಿಧಿ

ಸದ್ಯದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ₹ 760 ಕೋಟಿ ನೆರವು ನೀಡಲು ಬದ್ಧವಾಗಿರುವುದಾಗಿ ಸಾಮಾಜಿಕ ತಾಣ ಫೇಸ್‌ಬುಕ್‌ ಕೂಡ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.