ADVERTISEMENT

ಬಿಳಿ ಜೋಳ ಧಾರಣೆ ಏರಿಕೆ

ರೈತರ ಬಳಿ ಉತ್ಪನ್ನವಿಲ್ಲ: ಮಾರುಕಟ್ಟೆಯಲ್ಲಿ ಕೊರತೆ

ಡಿ.ಬಿ, ನಾಗರಾಜ
Published 26 ಮೇ 2019, 20:00 IST
Last Updated 26 ಮೇ 2019, 20:00 IST
ವಿಜಯಪುರದ ಬಜಾರ್‌ನಲ್ಲಿ ವಹಿವಾಟು ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಬಜಾರ್‌ನಲ್ಲಿ ವಹಿವಾಟು ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ನಾಡಿನಾದ್ಯಂತ ಮನೆ ಮಾತಾಗಿರುವ ಬಿಜಾಪುರದ ಬಿಳಿ ಜೋಳದ ಬೆಲೆ ಗಗನಮುಖಿಯಾಗಿದೆ. ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಧಾರಣೆ ನಿಗದಿಯಾಗಿದೆ.

ಎಪಿಎಂಸಿಯಲ್ಲಿ ಒಂದು ಕ್ವಿಂಟಲ್‌ ಬಿಳಿ ಜೋಳದ ಬೆಲೆ ₹ 3500 ಇದ್ದರೆ, ವಿಜಯಪುರದ ಹಳೆಯ ಜೋಳದ ಬಜಾರ್‌ನ ಚಿಲ್ಲರೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 4000 ಧಾರಣೆಯಿದೆ. ಬಿಳಿ ಜೋಳ ಉತ್ಪನ್ನದ ಇತಿಹಾಸದಲ್ಲೇ ಈ ಧಾರಣೆ ದಾಖಲೆಯ ಬೆಲೆಯೆನಿಸಿದೆ.

ಜಿಲ್ಲೆಯಲ್ಲಿ ಗೃಹೋದ್ಯಮವಾಗಿ ಖಡಕ್‌ ರೊಟ್ಟಿ ತಯಾರಿಕೆ ಹಲ ವರ್ಷಗಳಿಂದ ನಡೆದಿದೆ. ಬಿಳಿ ಜೋಳದ ಧಾರಣೆ ಏರಿಕೆ ಪರಿಣಾಮ ಖಡಕ್‌ ರೊಟ್ಟಿಯ ಬೆಲೆಯೂ ತುಟ್ಟಿಯಾಗಿದೆ..

ADVERTISEMENT

ಈ ಹಿಂದೆ ಒಂದು ಖಡಕ್‌ ರೊಟ್ಟಿಯ ಬೆಲೆ ವಿಜಯಪುರದಲ್ಲಿ ₹ 3 ಇತ್ತು. ಇದೀಗ ₹ 4. ₹ 4.50 ಆಗಿದೆ. ದೂರದ ಬೆಂಗಳೂರು, ಮೈಸೂರು ಇನ್ನಿತರೆ ಭಾಗಕ್ಕೆ ಈ ರೊಟ್ಟಿಗಳು ಸರಬರಾಜಾಗಿ, ಮಾರಾಟವಾಗುವ ವೇಳೆಗೆ ಮತ್ತಷ್ಟು ತುಟ್ಟಿಯಾಗಲಿದೆ.

ಧಾರಣೆ ದುಪ್ಪಟ್ಟು: ‘ವಿಜಯಪುರ ಎಪಿಎಂಸಿ ಮಾರುಕಟ್ಟೆಗೆ 2018ರ ಮಾರ್ಚ್‌ನಲ್ಲಿ 1121 ಕ್ವಿಂಟಲ್‌ ಬಿಳಿ ಜೋಳ ಆವಕವಾಗಿತ್ತು. ಧಾರಣೆ ಕ್ವಿಂಟಲ್‌ಗೆ ₹ 1600ರಿಂದ
₹ 2000 ದೊರೆತಿತ್ತು. ಏಪ್ರಿಲ್‌ನಲ್ಲಿ 18 ಕ್ವಿಂಟಲ್‌, ಮೇ ತಿಂಗಳಲ್ಲಿ 20 ಕ್ವಿಂಟಲ್‌ ಆವಕವಾಗಿದ್ದು, ಬೆಲೆ ₹ 2100 ಇತ್ತು.’

‘2019ರ ಮಾರ್ಚ್‌ ತಿಂಗಳಲ್ಲಿ 2054 ಕ್ವಿಂಟಲ್‌ ಬಿಳಿ ಜೋಳ ಆವಕವಾಗಿ, ಧಾರಣೆ ₹ 2200–₹ 2300 ಇತ್ತು. ಏಪ್ರಿಲ್‌ನಲ್ಲಿ 530 ಕ್ವಿಂಟಲ್ ಆವಕವಾಗಿದ್ದು, ಬೆಲೆ ₹ 2,500ರಿಂದ ₹ 3,200ರಷ್ಟಿತ್ತು. ಮೇ ತಿಂಗಳಲ್ಲಿ 52 ಕ್ವಿಂಟಲ್ ಬಿಳಿಜೋಳ ವಿಜಯಪುರ ಮಾರುಕಟ್ಟೆಗೆ ಬಂದಿದ್ದು, ಧಾರಣೆ ₹ 2800ರಿಂದ ₹ 3500ವರೆಗೂ ವಹಿವಾಟು ನಡೆದಿದೆ. ಇದು ನಮ್ಮ ಮಾರುಕಟ್ಟೆಯಲ್ಲಿ ಬಿಳಿ ಜೋಳಕ್ಕೆ ಇದುವರೆಗಿನ ಅತ್ಯಂತ ಹೆಚ್ಚು ಬೆಲೆಯಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸ್ಥಳೀಯವಾಗಿ ಬಿಳಿ ಜೋಳ ಸಿಗದಿದ್ದರಿಂದ ವರ್ತಕರು, ಆಂಧ್ರಪ್ರದೇಶದ ವಿವಿಧೆಡೆಯಿಂದ ಜೋಳ ತರಿಸಿಕೊಳ್ಳುತ್ತಿದ್ದಾರೆ. ಇದರ ಧಾರಣೆ ₹ 2600ರಿಂದ ₹ 2800 ನಡೆದಿದೆ’ ಎಂದು ಹೇಳಿದರು.

‘ಜವಾರಿ ಜೋಳ ಕ್ವಿಂಟಲ್‌ಗೆ ₹ 3400ರಿಂದ ₹ 3600 ನಡೆದಿದೆ. ಸಾರವಾಡ, ಹೊನಗನಹಳ್ಳಿ ಸುತ್ತ ಮುತ್ತ ಬೆಳೆಯುವ ಡೋಣಿ ನದಿ ಪಾತ್ರದ ಬಾರ್ಸಿ ಜೋಳ ಕ್ವಿಂಟಲ್‌ಗೆ ₹ 3800ರಿಂದ ₹ 4000 ದರದಂತೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಇನ್ನಷ್ಟು ಹೆಚ್ಚಿದೆ’ ಎಂದು ವಿಜಯಪುರದ ಹಳೆಯ ಜೋಳದ ಬಜಾರ್‌ನ ವ್ಯಾಪಾರಿ ರಮೇಶ ರಜಪೂತ ತಿಳಿಸಿದರು.

ಬೆಳೆಯಿದ್ದಾಗ ಬಂಪರ್ ಬೆಲೆ ಸಿಗಬೇಕ್ರೀ..!

‘ಬರದಾಗ್ಲೂ 25 ಕ್ವಿಂಟಲ್‌ ಬಿಳಿ ಜೋಳ ಬೆಳೆದಿರುವೆ. ಮಳೆಯಾಗಿದ್ರೇ ಬಂಪರ್ ಬೆಳೆ ಸಿಗ್ತಿತ್ತು. ಈಗಿನ ಧಾರಣೆ ಬಿಳಿಜೋಳಕ್ಕೆ ಬಂಗಾರದ ಮೌಲ್ಯ ತಂದುಕೊಡ್ತಿತ್ತು. ಆದರೆ ಈಗ ಧಾರಣೆಯಿದ್ದರೂ; ಬೆಳೆ ಇಲ್ಲದಂಗಾಗೈತ್ರೀ. ರೈತರಿಗೆ ಇದರಿಂದ ಏನು ಉಪಕಾರವಿಲ್ರೀ. ಬೆಳೆಯಿದ್ದಾಗ ಈ ಬಂಪರ್ ಬೆಲೆ ಸಿಗಬೇಕಿತ್ರೀ’ ಎನ್ನುತ್ತಾರೆ ಬಸವನಬಾಗೇವಾಡಿಯ ಬಸವರಾಜ ಜಿ.ಗೊಳಸಂಗಿ.

‘ಹಿಂಗಾರಿ ವೈಫಲ್ಯದಿಂದ ಬಿಳಿಜೋಳದ ಫಸಲೇ ರಾಶಿಯಾಗಲಿಲ್ಲ. ಈಚೆಗೆ ಬಿಳಿಜೋಳ ಬೆಳೆಯೋದು ಕಡಿಮೆಯಾಗಿದ್ದರಿಂದ ಧಾರಣೆ ತುಟ್ಟಿಯಾಗೈತಿ. ನಮ್ಮ ವಾತಾವರಣಕ್ಕೆ ಜೋಳ ಬಳಸುವವರೇ ಹೆಚ್ಚು. ಆದರೆ ಧಾರಣೆ ದುಪ್ಪಟ್ಟಾಗಿರುವುದು ಪೆಟ್ಟು ನೀಡಿದಂತಾಗಿದೆ’ ಎಂದು ಜೋಳ ಖರೀದಿಗೆಂದೇ ವಿಜಯಪುರಕ್ಕೆ ಬಂದಿದ್ದ ರಾಮಪ್ಪ ಹಿಟ್ನಳ್ಳಿ, ಸಿದ್ದರಾಮಪ್ಪ ಅವಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.