ADVERTISEMENT

ಕೋರ್ಟ್‌ ಮೆಟ್ಟಿಲೇರಿದ ಕಲ್ಯಾಣಿ ಗ್ರೂಪ್‌ ಆಸ್ತಿ ಹಂಚಿಕೆ ವಿವಾದ

ಪಿಟಿಐ
Published 27 ಮಾರ್ಚ್ 2024, 15:56 IST
Last Updated 27 ಮಾರ್ಚ್ 2024, 15:56 IST
   

ಮುಂಬೈ: ಭಾರತ್‌ ಫೋರ್ಜ್‌ ಕಂಪನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಮತ್ತು ಅವರ ತಂಗಿ ಸುಗಂಧಾ ಹಿರೇಮಠ್‌ ಅವರ ನಡುವಿನ ಕೌಟುಂಬಿಕ ಆಸ್ತಿ ಹಂಚಿಕೆ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ. 

ಕಲ್ಯಾಣಿ ಗ್ರೂಪ್‌ನಲ್ಲಿ ತಮಗೂ ಪಾಲು ಕೊಡಬೇಕಿದೆ ಎಂದು ಸುಗಂಧಾ ಅವರ ಮಕ್ಕಳಾದ ಸಮೀರ್‌ ಹಾಗೂ ಪಲ್ಲವಿ ಅವರು, ಪುಣೆಯ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಮಾರ್ಚ್‌ 20ರಂದು ದಾವೆ ಹೂಡಿದ್ದಾರೆ. ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಲ್ಲಿ ತಮಗೂ ಹಕ್ಕಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

‘ನಮ್ಮ ಮುತ್ತಜ್ಜ ಅಣ್ಣಪ್ಪ ಕಲ್ಯಾಣಿ ಅವರು ಅವಿಭಕ್ತ ಕುಟುಂಬದ ಆಸ್ತಿಯ ಮೂಲ ಒಡೆಯರಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ನಿಧನರಾದ ಬಳಿಕ ಅವರ ಪುತ್ರ ನೀಲಕಂಠ ಕಲ್ಯಾಣಿ (ಸುಗಂಧಾ ಮತ್ತು ಬಾಬಾ ಕಲ್ಯಾಣಿ ಅವರ ತಂದೆ) ಈ ಆಸ್ತಿಯ ಕರ್ತರಾಗಿದ್ದಾರೆ. ತಾತಾ ನೀಲಕಂಠಪ್ಪ ಅವರ ಆರೋಗ್ಯ ಹದಗೆಟ್ಟಿದ್ದರಿಂದ 2011ರಿಂದ ಬಾಬಾ ಕಲ್ಯಾಣಿ ಅವರು ಇಡೀ ಆಸ್ತಿಯ ಮೇಲೆ ಒಡೆತನ ಸಾಧಿಸಿ ಏಕಾಂಗಿಯಾಗಿ ಅನುಭವಿಸುತ್ತಿದ್ದಾರೆ’ ಎಂದು ಸಮೀರ್‌ ಮತ್ತು ಪಲ್ಲವಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಹಿಕಾಲ್‌ ಬಯೊಟೆಕ್‌ ಕಂಪನಿಯಲ್ಲಿ ಸಮರ್ಪಕವಾಗಿ ಷೇರುಗಳನ್ನು ಹಂಚಿಕೆ ಮಾಡಿಲ್ಲವೆಂದು ಆರೋಪಿ ಸುಗಂಧಾ ಅವರು, 2023ರ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಕಲ್ಯಾಣಿ ಕುಟುಂಬದ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಎಂಬುದು ನಿಖರವಾಗಿಲ್ಲ ಗೊತ್ತಾಗಿಲ್ಲ. ಆದರೆ, ಭಾರತ್‌ ಫೋರ್ಜ್‌ ಸೇರಿ ಎಂಟು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ₹69 ಸಾವಿರ ಕೋಟಿ ಇದೆ ಎಂದು ಮೂಲಗಳು ತಿಳಿಸಿವೆ.   

‘ಬಾಬಾ ಕಲ್ಯಾಣಿ ಅವರ ಹೆಸರಿಗೆ ಕಳಂಕ ತರುವುದೇ ಈ ದಾವೆಯ ಹಿಂದಿರುವ ಮೂಲ ಉದ್ದೇಶವಾಗಿದೆ’ ಎಂದು ಭಾರತ್‌ ಫೋರ್ಜ್‌ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.