ADVERTISEMENT

ಆರ್‌ಬಿಐ ಕ್ರಮದಿಂದ ಠೇವಣಿ ಪ್ರಮಾಣ ಇಳಿಕೆಯಾಗದು: ಕರ್ಣಾಟಕ ಬ್ಯಾಂಕ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 15:46 IST
Last Updated 15 ನವೆಂಬರ್ 2021, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಣ್ಣ ಹೂಡಿಕೆದಾರರಿಗೆ ಸರ್ಕಾರದ ಸಾಲಪತ್ರಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್ ಅವಕಾಶ ಕಲ್ಪಿಸಿರುವುದರ ಪರಿಣಾಮವಾಗಿ ಜನ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಇರಿಸುವ ಪ್ರಮಾಣದ ಮೇಲೆ ಹೆಚ್ಚಿನ ಪರಿಣಾಮ ಆಗಲಿಕ್ಕಿಲ್ಲ ಎಂದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬ್ಯಾಂಕ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿ ನಡಸಿದ ಪ್ರದೀಪ್ ಕುಮಾರ್ ಅವರು, ‘ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇರಬಹುದಾಗಿದ್ದ ಒಂದು ಭಾಗವು ಸಾಲಪತ್ರಗಳಲ್ಲಿ ಹೂಡಿಕೆ ಆಗುವುದನ್ನು ಅಲ್ಲಗಳೆಯಲಾಗದು. ಆದರೆ, ಅದು ಬ್ಯಾಂಕ್‌ಗಳ ಮೇಲೆ ದೊಡ್ಡ ಪರಿಣಾಮ ಬೀರಲಿಕ್ಕಿಲ್ಲ’ ಎಂದು ಹೇಳಿದರು.

ಸಾಲಪತ್ರಗಳಲ್ಲಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸಿರುವುದರ ಪರಿಣಾಮವಾಗಿ, ಸಣ್ಣ ಹೂಡಿಕೆದಾರರ ಉಳಿತಾಯದ ಹಣದಲ್ಲಿನ ಒಂದು ಪಾಲು ಬ್ಯಾಂಕ್‌ಗಳಿಂದ ಆರ್‌ಬಿಐ ಕಡೆ ಹರಿಯಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ ಅಭಿಯಾನವನ್ನು ಬ್ಯಾಂಕ್ ಆರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ ಹೊಸದಾಗಿ 4.15 ಲಕ್ಷ ಖಾತೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಗ್ರಾಹಕರು ಇರುವಲ್ಲಿಗೇ ತೆರಳಿ, ಅವರಿಗೆ ಕರ್ಣಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು. ಈ ಅಭಿಯಾನವು ಫೆಬ್ರುವರಿ 28ರವರೆಗೆ ಜಾರಿಯಲ್ಲಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.